

ಮುದ್ದೇಬಿಹಾಳ: ನಾಗರಬೆಟ್ಟದ ಆಕ್ಸರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿ ವರ್ಷದಿಂದ ವರ್ಷಕ್ಕೆ ಸಾಧನೆಯತ್ತ ಮುನ್ನುಗ್ಗುತ್ತಿದೆ. ಇಲ್ಲಿ ತರಬೇತಿ ಪಡೆದವರು ಕೆಲವು ವರ್ಷಗಳಿಂದ 150ಕ್ಕೂ ಹೆಚ್ಚು ಮೆಡಿಕಲ್ ಸೀಟುಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ನಂಬರ್ ಒನ್ ನೀಟ್ ತರಬೇತಿ ಹೆಗ್ಗಳಿಕೆ ಉಳಿಸಿಕೊಂಡು ಬರುವಲ್ಲಿ ನಮ್ಮ ಸಂಸ್ಥೆ ಸಾಕಷ್ಟು ಶ್ರಮವಹಿಸುತ್ತಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ಹೇಳಿದರು.
ನಾಗರಬೆಟ್ಟ ಗುಡ್ಡದ ಪಕ್ಕದಲ್ಲಿರುವ ಆಕ್ಸರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಕ್ಸರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿಯ ಸ್ಕಾಲರ್‌ಶಿಪ್ ಎಕ್ಸಾಂ-2025 ಸ್ಪರ್ಧಾ ಪರೀಕ್ಷೆ ವಿಜೇತರನ್ನು ಪುರಸ್ಕರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಆಕ್ಸರ್ಡ್ ಪಾಟೀಲ್ಸ್ ಜೀನಿಯಸ್, ಜ್ಯೂನಿಯರ್ ಜೀನಿಯಸ್ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾ ಪರೀಕ್ಷೆ ನಡೆಸಿ ಒಂದು ಕೋಟಿ ರೂ. ಮೌಲ್ಯದ ವಿವಿಧ ಸ್ಕಾಲರ್‌ಶಿಪ್ ಸೌಲಭ್ಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿ ನೀಟ್ ತರಬೇತಿ ಪಡೆಯಲು ಇಚ್ಛಿಸುವವರಿಗೂ ಲಾಂಗ್‌ಟರ್ಮ್ ಪ್ರವೇಶ ಮತ್ತು ಊಟ, ವಸತಿಯೊಂದಿಗೆ ಉಚಿತ ಶಿಕ್ಷಣಕ್ಕಾಗಿ ಕೋಟಿ ರೂ. ಮೌಲ್ಯದ ಪರೀಕ್ಷೆ ಏರ್ಪಡಿಸಲಾಗಿದೆ. ಪಿಯುಸಿ ದ್ವಿತೀಯ ವರ್ಷ ಪೂರೆಸಿರುವ ಆಕ್ಸರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು ಸೇರಿ ವಿವಿಧ ಕಾಲೇಜುಗಳಿಂದ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಮೊದಲ ಪ್ರಯತ್ನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಪರೀಕ್ಷೆಯಲ್ಲಿ ಒಂದರಿಂದ ಇಪ್ಪತ್ತು ರ‌್ಯಾಂಕ್ (ಕ್ರಮಸಂಖ್ಯೆ) ಪಡೆಯುವವರಿಗೆ ತಲಾ ರೂ. 2 ಲಕ್ಷ ಮೌಲ್ಯದ ಊಟ, ವಸತಿ ಸಹಿತ ಒಂದು ವರ್ಷದ ಉಚಿತ ಶಿಕ್ಷಣ, ಇಪ್ಪತ್ತೊಂದರಿಂದ ನಲವತ್ತು ರ‌್ಯಾಂಕ್ ಪಡೆಯುವವರಿಗೆ ರೂ. 1.20 ಲಕ್ಷ ಮೌಲ್ಯದ ಕಲಿಕಾ ಶುಲ್ಕ ವಿನಾಯಿತಿಯ ಒಂದು ವರ್ಷದ ಉಚಿತ ಶಿಕ್ಷಣ ಕೊಡಲಾಗುತ್ತದೆ. ನೀಟ್‌ಗೆ ಸಂಬಂಧಿಸಿದ ಪಿಯುಸಿ ಹಂತದ ಬಯಾಲಜಿ, ಫಿಸಿಕ್ಸ್, ಕೆಮಿಸ್ಟ್ರಿ ವಿಷಯಗಳಲ್ಲಿ ಎರಡು ಗಂಟೆ ಕಾಲಾವಧಿಯ 100 ಪ್ರಶ್ನೆಗಳ 400 ಅಂಕಗಳ (ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ ಮೈನಸ್ ಒಂದು ಅಂಕ ಮಾದರಿ) ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿತ್ತು ಎಂದರು.
ಮೊದಲ 20 ರ‌್ಯಾಂಕ್ ಪಡೆದ ಸಮರ್ಥ ಸೋನವಾಲ್ಕರ್, ಭೀಮನಗೌಡ ಚೌಧರಿ, ಚೈತನ್ಯ ಜೈನಾಪುರ, ಮಂಜುನಾಥ ಕರ್ಜಗಿ, ಸ್ಫೂರ್ತಿ, ಸಂಜಯ್‌ಕುಮಾರ ಸಿ., ಸೃಷ್ಟಿ ಮುಧೋಳ, ಆದರ್ಶ ಬಿರಾದಾರ, ಪೂನಂ ರಾಠೋಡ, ತನುಜಾ, ಮಂಜುನಾಥ ಕಾಖಂಡಕಿ, ಬಸವರಾಜ ರಾಠೋಡ, ಮನೋಜ ಚಾಕೋಟಿ, ಪವಿತ್ರಾ ಬಡಕನವರ್, ಅನೀಲ ಕದಮ್, ಶ್ರೀಗೌರಿ, ಮಲ್ಲಿಕಾರ್ಜುನ ಗುಬ್ಬೇವಾಡ, ಸುಷ್ಮಿತಾ ಬಿದರಿ, ಪ್ರಭಾವತಿ ಸರಕಾರ, ಸುಪ್ರಿಯಾ ಮ್ಯಾಗೇರಿ ಸೇರಿ ಎಲ್ಲ 40 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಢವಳಗಿ ಸ್ವತಂತ್ರ ಪಿಯು ಕಾಲೇಜು ಪ್ರಾಂಶುಪಾಲ ಎನ್.ಎಂ. ಬಿರಾಜದಾರ, ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ), ಆಕ್ಸರ್ಡ್ ಪಾಟೀಲ್ಸ್ ಇಂಗ್ಲಿಷ್ ಮೀಡಿಯಂ ಶಾಲೆ ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ, ರಾಜಶೇಖರ ಹಿರೇಮಠ, ಮಂಜುನಾಥ ಮಂಕಣಿ, ಆನಂದ ನಾವಲಗಿ, ಸಂದೀಪ ಘೋರ್ಪಡೆ, ಮಹಾಂತೇಶ ಬಿರಾದಾರ, ಸಿಬ್ಬಂದಿ ಇದ್ದರು.
2025ರ ನೀಟ್ ಪರೀಕ್ಷೆ ಹಿಂದಿನ ಪರೀಕ್ಷೆಗಳಿಗಿಂತಲೂ ಅತ್ಯಂತ ಕಠಿಣವಾಗಿತ್ತು. ಆದರೂ ನಮ್ಮಲ್ಲಿ ತರಬೇತಿ ಪಡೆದವರು ಕಠಿಣ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ನಮ್ಮಲ್ಲಿರುವ ಬೇರೆ ರಾಜ್ಯಗಳ ಪ್ರತಿಭಾವಂತ ಉಪನ್ಯಾಸಕರು ನೀಟ್‌ಗಾಗಿಯೇ ಪಾಂಡಿತ್ಯ ಹೊಂದಿದ್ದಾರೆ. ನಮ್ಮ ತಂದೆ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ ಅವರ ಮಾರ್ಗದರ್ಶನ ಸಾಧನೆಗೆ, ಸಂಸ್ಥೆಗೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ.
-ಅಮೀತ್‌ಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ.
2025ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ಆಕ್ಸರ್ಡ್ ಪಾಟೀಲ್ಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ ವಿದ್ಯಾರ್ಥಿ ಅಕೀಲಅಹ್ಮದ್ ನದಾಫ್ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವುದು ಇಲ್ಲಿನ ಉತ್ತಮ ಶಿಕ್ಷಣಕ್ಕೆ ಉದಾಹರಣೆಯಾಗಿದೆ. ಹಿರಿಯ ಪ್ರಾಥಮಿಕ ಹಂತದಿಂದಲೇ ನಮ್ಮಲ್ಲಿ ೌಂಡೇಷನ್ ಕೋರ್ಸ್ ತರಬೇತಿ ಕೊಡುತ್ತಿರುವುದು ವಿಶೇಷವಾಗಿದೆ.
-ಇಸ್ಮಾಯಿಲ್ ಮನಿಯಾರ್, ಮುಖ್ಯಾಧ್ಯಾಪಕರು, ಆಕ್ಸರ್ಡ ಪಾಟೀಲ್ಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ, ನಾಗರಬೆಟ್ಟ.