

ಮಡಿಕೇರಿ:
ಸಿಬ್ಬಂದಿ ಕೊರತೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗುರುವಾರ ನಡೆದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ನಿಯೋಗವೊಂದು ತೆರಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಎಸ್‌ಡಿಪಿಐ ಸದಸ್ಯ ಅಮೀನ್ ಮೊಹಿಸೀನ್ ನಗರಸಭೆಯಲ್ಲಿ ೧೬೪ ಹುದ್ದೆಗಳು ಖಾಲಿ ಇದೆ. ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕ ಕೆಲಸಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ವೈದ್ಯಕೀಯ ವೆಚ್ಚ ಭರಿಸಲು ಕೋರಿ ಬರುವ ಮನವಿಗಳು ವಿಲೇವಾರಿ ಆಗತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿದೆ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಧ್ವನಿಗೂಡಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅನಿತಾ ಪೂವಯ್ಯ, ಇರುವ ಸಿಬ್ಬಂದಿ ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಆದಷ್ಟು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಬ್ಬೊಬ್ಬರಿಗೂ ವಿವಿಧ ಜವಾಬ್ದಾರಿಗಳನ್ನು ಕೊಡಲಾಗಿದೆ. ಹಾಗಾಗಿ ಒತ್ತಡದ ಮಧ್ಯೆ ಕೆಲಸ ಮಾಡುವ ಸ್ಥಿತಿ ಇದೆ. ತುರ್ತಾಗಿ ಖಾಲಿ ಹುದ್ದೆಗಳ ಭರ್ತಿ ಆಗಬೇಕಿದ್ದು ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಶಾಸಕರ ನೇತೃತ್ವದಲ್ಲಿ ನಿಯೋಗ ಹೋಗಲಾಗುವುದು ಎಂದರು.
ನಗರದಲ್ಲಿ ಹೆಚ್ಚಾಗುತ್ತಿರುವ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಿ. ಈ ಮೂಲಕ ಮುಂದಾಗಬಹುದಾದ ಅಪಾಯದಿಂದ ರಕ್ಷಿಸಿ ಎಂದು ಎಸ್‌ಡಿಪಿಐ ಸದಸ್ಯ ಮನ್ಸೂರ್ ಅಲಿ ಹೇಳಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ವಿಜಯ್, ನಾಯಿಗಳ ಹಾವಳಿ ತಡೆಯಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾತ್ರ ಈಗ ಕಾನೂನಿನ ಅಡಿಯಲ್ಲಿ ಇರುವ ಏಕೈಕ ಉಪಾಯ. ಆದರೆ ಟೆಂಡರ್ ಕರೆದರೂ ಯಾರೂ ಮುಂದೆ ಬರುತ್ತಿಲ್ಲ ಎಂದರು. ಈ ವೇಳೆ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದರಿಂದ ಬೀದಿ ನಾಯಿಗಳ ಉಪಟಳ ಜಾಸ್ತಿ ಆಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಮಾತ್ರ ಮಾಂಸ ಮಾರಾಟಕ್ಕೆ ಅನುಮತಿ ಕೊಡುವಂತಾಗಬೇಕು. ಇದರಿಂದ ನಗರಸಭೆಗೆ ಆದಾಯವೂ ಜಾಸ್ತಿ ಆಗಲಿದೆ ಎಂದರು. ಇದಕ್ಕೆ ಶ್ವೇತಾ ಪ್ರಶಾಂತ್ ಸೇರಿದಂತೆ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿದರು. ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಅಮೀನ್ ಮೊಹಿಸೀನ್, ನಗರಸಭೆ ಒಂದು ವೇಳೆ ಇಂತಹ ನಿರ್ಧಾರ ತೆಗೆದುಕೊಂಡರೆ ಅದು ಮೂರ್ಖತನ ಆಗುತ್ತದೆ ಎಂದರು. ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಕೂಡ ಇದನ್ನು ಅನುಮೋದಿಸಿದರು. ಬೀದಿ ನಾಯಿ ಸಮಸ್ಯೆ ಬಗೆಹರಿಸಲು ವೈಜ್ಞಾನಿಕ ಕ್ರಮ ಅನುಸರಿಸುವಂತೆ ಸದಸ್ಯರು ಸಲಹೆ ನೀಡಿದರು.
ಸಭೆಯಲ್ಲಿ ಆಗುತ್ತಿರುವ ಚರ್ಚೆಗಳು ನಿರ್ಣಯ ಪುಸ್ತಕದಲ್ಲಿ ಸರಿಯಾಗಿ ದಾಖಲಾಗುತ್ತಿಲ್ಲ. ದೊಡ್ಡ ದೊಡ್ಡ ಚರ್ಚೆಗಳಾದರೂ ಕೆಲವೇ ಸಾಲುಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ದಾಖಲೆಗಳು ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದ ಮನ್ಸೂರ್ ಅಲಿ, ಅಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕು ಎಂದರು. ಈ ವೇಳೆ ಉತ್ತರಿಸಿದ ಅಧಿಕಾರಿಗಳು ನಗರಸಭೆ ಅಧ್ಯಕ್ಷರ ಸೂಚನೆ ಮೇರೆ ಈ ರೀತಿ ಮಾಡಲಾಗಿದೆ ಎಂದು ಪರೋಕ್ಷವಾಗಿ ಉತ್ತರಿಸಿದರು. ಇದು ಆಡಳಿತ ಪಕ್ಷ ಸೇರಿದಂತೆ ಎಲ್ಲಾ ಸದಸ್ಯರನ್ನು ಕೆರಳುವಂತೆ ಮಾಡಿತು. ಅಧ್ಯಕ್ಷೆ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಸಾರಾಂಶ ಮಾತ್ರ ಬರೆಯುವುದಾದರೆ ಇಲ್ಲಿ ಚರ್ಚೆಯ ಅಗತ್ಯ ಏನು ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಅಧ್ಯಕ್ಷೆ ಅನಿತಾ ಪೂವಯ್ಯ ಇನ್ನು ಮುಂದೆ ನಿರ್ಣಯ ಪುಸ್ತಕದಲ್ಲಿ ಚರ್ಚೆಯ ಎಲ್ಲಾ ವಿಷಯಗಳನ್ನು ದಾಖಲಿಸುವುದಾಗಿ ಭರವಸೆ ನೀಡಿದರು.
ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದೆ. ಹಾಗಾಗಿ ನಗರಕ್ಕೆ ಕುಡಿಯುವ ನೀರು ಪೂರೈಕೆ ವ್ಯತ್ಯಯ ಆಗದಂತೆ ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸದಸ್ಯ ಅಪ್ಪಣ್ಣ ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಪೌರಾಯುಕ್ತ ವಿಜಯ್ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದೆ ಮಳೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು. ಇದೇ ವೇಳೆ ಮಡಿಕೇರಿಗೆ ಮಂಜೂರಾಗಿರುವ ಅಮೃತ್ - ೨ ಸಮಗ್ರ ಕುಡಿಯುವ ನೀರಿನ ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆಗೆ ಒಟ್ಟು ೫೩ ಕೋಟಿ ರೂ. ಬೇಕು. ಈ ಯೋಜನೆ ಅಡಿಯಲ್ಲಿ ಮೊದಲು ೨೦ ಕೋಟಿ ರೂ. ಮಂಜೂರಾಗಿತ್ತು. ಈಗ ಶಾಸಕರ ಪ್ರಯತ್ನದಿಂದ ಮತ್ತೆ ೨೬ ಕೋಟಿ ರೂ. ಮಂಜೂರಾಗಿದೆ. ಇನ್ನೂ ೭ ಕೋಟಿ ರೂ. ಅಗತ್ಯ ಇದೆ. ಯೋಜನೆಗೆ ತಾಂತ್ರಿಕ ಅನುಮೋದನೆ ಸಿಕ್ಕಿದ್ದು ಮುಂದಿನ ಪ್ರಕ್ರಿಯೆಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಉಪಾಧ್ಯಕ್ಷೆ ಸವಿತಾ ರಾಕೇಶ್, ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.