ಪುರಪಿತೃಗಳಿಗೆ ಎರಡು ಆಯ್ಕೆ ನೀಡಿದ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್

28-klr-1
Published on

ಕೋಲಾರ: ನಗರಸಭೆಯ ವಾರ್ಡ್‌ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಲು ನೀವೇ ದಿನಾಂಕ ನಿಗದಿಪಡಿಸಿ ನಮ್ಮನ್ನು ಕರೆಯಿರಿ, ಇಲ್ಲ ನಾವೇ ನೇರವಾಗಿ ಜನರ ಬಳಿ ಹೋಗುತ್ತೇವೆ ಎಂದು ಎಸಿಬಿ ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಪುರಪಿತೃಗಳಿಗೆ ಎರಡು ಆಯ್ಕೆ ಮುಂದಿಟ್ಟಿದ್ದಾರೆ.

ಎಸಿಬಿಯಿಂದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ವಾರ್ಡ್ ಹಂತದಲ್ಲಿ ಸಭೆ ನಡೆಸಲು ಉದ್ದೇಶಿಸಿರುವ ಮಾಹಿತಿ ನೀಡಲು ಸಭೆಗೆ ಸದಸ್ಯರನ್ನೂ ಕರೆಯಲಾಗಿದೆ. ನೀವೇ ದಿನಾಂಕ ನಿಗದಿಪಡಿಸಿ ನಮ್ಮನ್ನು ಕರೆಯಿರಿ. ಸಾರ್ವಜನಿಕರ ಸಮಸ್ಯೆ ಆಲಿಸೋಣ, ಸಹಕರಿಸಿದರೆ ಜನರ ದೃಷ್ಟಿಯಲ್ಲಿ ಒಳ್ಳೆಯರಾಗುತ್ತೀರಿ, ನಿಮಗೇ ಗೌರವ. ಸಹಕರಿಸದಿದ್ದಲ್ಲಿ ನಾನೇ ಜನರ ಬಳಿ ಹೋಗುತ್ತೇನೆ. ಆಗ ದೂರು ಬಂದರೆ ಸದಸ್ಯರು ನಮ್ಮ ಮೇಲೆ ಬೇಸರಿಸಿಕೊಳ್ಳಬಾರದು ಎಂದರು.

ಸರ್ಕಾರದ ಸೌಲಭ್ಯ ಸಾರ್ವಜನಿಕರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಅಪೇಕ್ಷೆ ಇಟ್ಟುಕೊಂಡು ಹೋಗುವ ಕಡೆ ಎಸಿಬಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮಧ್ಯ ಪ್ರವೇಶಿಸುತ್ತದೆ. ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ಎಸಿಬಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದರು.

ಪೌರಾಯುಕ್ತ ಶ್ರೀಕಾಂತ್ ಮಾತನಾಡಿ,ಅಧಿಕಾರ ವಹಿಸಿಕೊಂಡ ಎರಡು ತಿಂಗಳಿನಿಂದ ಪಾರದರ್ಶಕ ಆಡಳಿತಕ್ಕೆ ಪ್ರಯತ್ನಿಸುತ್ತಿದ್ದೇನೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ಅಧಿಕಾರಿಗಳು ಬ್ಲಾಕ್‌ಮೇಲ್‌ಗೆ ಹೆದರುವ ಅಗತ್ಯವಿಲ್ಲ. ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸೋಣ ಎಂದರು.

ಅಹವಾಲು: ನಗರಸಭೆ ವ್ಯಾಪ್ತಿಯ ಕಸಬಾ ಹೋಬಳಿ ಸರ್ವೇ ನಂ. 28ರಲ್ಲಿ 3.25 ಎಕರೆ ದನಗಳ ಓಣಿ ಅಕ್ರಮ ಖಾತೆ, ಖಾದ್ರಿಪುರದ ಸರ್ವೇ ನಂ.41ರಲ್ಲಿ 23.21 ಎಕರೆ ಸರ್ಕಾರಿ ಹಳ್ಳ ಜಮೀನಿನಲ್ಲಿ 5 ಎಕರೆ ಜಾಗ ಕಬಳಿಕೆ, ಪೇಟೆಚಾಮನಹಳ್ಳಿ ಗ್ರಾಮದ ಸ. ನಂ 6ರಲ್ಲಿ ಸರ್ಕಾರಿ ಕೆರೆ 24.21 ಎಕರೆ ಜಾಗ ಹುಡುಕಿಕೊಡಬೇಕು ಎನ್ನುವುದು ಸೇರಿ ಇನ್ನಿತರ ದೂರುಗಳ ಬಗ್ಗೆ ರೈತ ಸಂಘದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ನಳಿನಿಗೌಡ ಮನವಿ ಸಲ್ಲಿಸಿದರು.

ದಲಿತ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಬಹಿರಂಗವಾಗಿ ಓಡಾಡಿಕೊಂಡಿದ್ದರೂ ಪೊಲೀಸರು ಬಂಧಿಸಿಲ್ಲ ಎಂದು ಮುಖಂಡ ಸಂದೇಶ್ ವಿಡಿಯೋ ಚಿತ್ರೀಕರಣದ ಸಿಡಿ ಸಹಿತ ದೂರು ನೀಡಿದರೆ, ಮನೆ ಮೇಲೆ ಹಾದುಹೋಗಿರುವ ತ್ರಿಫೇಸ್ ವಿದ್ಯುತ್ ತಂತಿ ತೆರವುಗೊಳಿಸಲು ಕ್ರಮ ವಹಿಸುವಂತೆ ಸಾರಿಗೆ ನಗರದ ಕೋಮುಲ ಸುಮಿತ್ರಕುಮಾರಿ ದೂರು ನೀಡಿದರು.

ನಗರಸಭೆ ಸದಸ್ಯರಾದ ಮಂಜುನಾಥ್, ಅಂಬರೀಷ್, ನಾರಾಯಣಮ್ಮ, ಸದಸ್ಯರು, ಎಸಿಬಿ ಇನ್ಸ್‌ಪಕ್ಟರ್ ವೆಂಕಟಾಚಲಪತಿ ಮತ್ತು ನಗರಸಭೆ ಅಧಿಕಾರಿಗಳು ಹಾಜರಿದ್ದರು.

ಶೀಘ್ರ ಕೇಸು ದಾಖಲು: ಜಿಲ್ಲೆಯಲ್ಲಿ ಅಭಿವೃದ್ಧಿ ನಿಗಮವೊಂದರಲ್ಲಿ 10 ಕೋಟಿ ರೂ. ದುರ್ಬಳಕೆ ಬಗ್ಗೆ ದಾಖಲಾತಿ ಸಹಿತ ಬಂದಿರುವ ದೂರಿನ ಬಗ್ಗೆ ಪ್ರಕರಣ ದಾಖಲಿಸುವ ಸಂಬಂಧ ಮೇಲಧಿಕಾರಿಗಳ ಅನುಮತಿ ಕೋರಲಾಗಿದ್ದು, ಶೀಘ್ರ ಎರಡು ಪ್ರಕರಣ ದಾಖಲಾಗಲಿವೆ. ಜಿಲ್ಲೆಯ ವಾರ್ಷಿಕ ಬಜೆಟ್‌ನಲ್ಲಿ ಆಗಿರುವ ಖರ್ಚು ವೆಚ್ಚ ಸಂಬಂಧ ನಡೆದ ಆಡಿಟ್‌ನಲ್ಲಿ ಕಂಡುಬಂದ ವ್ಯತ್ಯಾಸದ ಹಣವನ್ನು ಸಂಬಂಧಿಸಿದ ಅಧಿಕಾರಿಯಿಂದ ವಸೂಲಿ ಮಾಡದಿರುವ ದೂರಿನ ಸಂಬಂಧ ಕ್ರಮ ವಹಿಸಲಾಗುತ್ತಿದೆ ಎಂದು ಪುರುಷೋತ್ತಮ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net