ವ್ಯಾಪಾರಿಗಳಿಂದಲೇ ಅಪಘಾತವಾಗಲ್ಲ

nagarasabe footpath meeting
meeting
Published on

ಬೀದಿಬದಿ ಅಂಗಡಿ ತಡೆರವಿಗೆ ನಗರಸಭೆ ಸದಸ್ಯ ಶ್ರೀನಿವಾಸ್ ಆಕ್ಷೇಪ


ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಸ್ತೆಗಳು ಹದಗೆಟ್ಟಿದ್ದರಿಂದ ಅಪಘಾತ ಸಂಭವಿಸುತ್ತಿವೆಯೇ ಹೊರತು ಅವಘಡಗಳಿಗೆ ಬೀದಿ ಬದಿ ವ್ಯಾಪಾರಸ್ಥರು ಕಾರಣವಲ್ಲ ಎಂದು ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು.
ನಗರಸಭೆಯ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ರಸ್ತೆ ಪೂರ್ತಿ ಗುಂಡಿಗಳಾಗಿವೆ. ಗುಂಡಿ ಮುಚ್ಚುವ ಕೆಲಸ ಯಾವ ಇಲಾಖೆಗೆ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪಿಡಬ್ಲುೃಡಿ ಅವರು ಎಚ್ಚೆತ್ತುಕೊಳ್ಳುತ್ತಿಲ್ಲ. ಅವಘಡಗಳು ಸಂಭವಿಸಿದರೆ ಉತ್ತರ ಕೊಡಬೇಕಾದದ್ದು ನಗರಸಭೆ. ಹಾಗಾದರೆ ಲೋಕೋಪಯೋಗಿ ಇಲಾಖೆಯ ಕೆಲಸವೇನು ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ವಡ್ಡರಹಳ್ಳಿ ರವಿ ಮಾತನಾಡಿ, ದೊಡ್ಡಬಳ್ಳಾಪುರ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಸುಮಾರು ಎರಡೂವರೆ ಲಕ್ಷ ಜನರು ವಾಸ ಮಾಡುತ್ತಿದ್ದಾರೆ. ನಗರದ ಬೆಳವಣಿಗೆಗೆ ತಕ್ಕಂತೆ ಮೂಲ ಸೌಲಭ್ಯ ಒದಗಿಸಿಕೊಡುವುದು ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಆಡಳಿತದ ಜವಾಬ್ದಾರಿ. ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ನಿಗದಿ ಮಾಡಿಕೊಡಬೇಕು. ಜನತೆಗೆ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ನಗರಸಭೆ ಸದಸ್ಯ ಶಿವಶಂಕರ್ ಮಾತನಾಡಿ, ಈವರೆಗೆ 1800 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದೇವೆ. ಅದರಲ್ಲಿ 180 ಜನರನ್ನು ಮಾತ್ರ ತೆರವುಗೊಳಿಸಿದ್ದೇವೆ. ಉಳಿದಂತೆ 1620 ಜನರಿಗೆ ಸಮಸ್ಯೆಯಾಗಿಲ್ಲ. ನಾವು ಬೇರಡೆ ವ್ಯಾಪಾರಕ್ಕೆ ಗುರುತು ಮಾಡಿದರೆ, ಅಲ್ಲಿಗೆ ವ್ಯಾಪಾರಿಗಳು ನಾವು ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಹಾಗಾಗಿ ಇದಕ್ಕೆ ಉತ್ತಮವಾದ ಪರ್ಯಾಯ ಹುಡುಕಬೇಕು ಎಂದರು.
ನಗರಠಾಣೆ ಇನ್‌ಸ್ಪೆಕ್ಟರ್ ಪ್ರೀತಂ ಶ್ರೇಯಂಕರ್ ಮಾತನಾಡಿ, 180 ಜನರ ಒಳಿತಿಗಾಗಿ 2.5 ಲಕ್ಷ ಜನರ ಹಿತವನ್ನು ಬಲಿಕೊಡಲು ಸಾದ್ಯವಿಲ್ಲ. ತೆರವು ಕಾರ್ಯಾಚರಣೆ ಎಲ್ಲ ತಾಲೂಕು, ಜಿಲ್ಲೆಗಳಲ್ಲೂ ನಡೆಯುತ್ತಿದೆ. ಪಾದಚಾರಿ ಮಾರ್ಗ ನಮ್ಮದಲ್ಲ ಎಂಬುದು ವ್ಯಾಪಾರಸ್ಥರಿಗೆ ಅರ್ಥವಾಗಬೇಕು. ನಗರಸಭೆ ಮತ್ತು ತಾಲೂಕು ಆಡಳಿತ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಬೀದಿ ವ್ಯಾಪಾರಿಗಳ ಸಂಘದ ಪ್ರತಿನಿಧಿ ನರೇಶ್ ಕುಮಾರ್ ಮಾತನಾಡಿ, 15 ದಿನಗಳಿಂದ ಬೀದಿ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಜೀವನ ದುಸ್ತರವಾಗಿದೆ. ಗೌರಿ-ಗಣೇಶ ಹಬ್ಬ ಬರುತ್ತಿದ್ದು, ಬೀದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳಲ್ಲಿ ಪಾದಚಾರಿ ಮಾರ್ಗದಿಂದ ಹಿಂದೆ ವ್ಯಾಪಾರ ಮಾಡಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net