

ಶಿವಾನಂದ ಹಿರೇಮಠ ಗದಗ
ನಗರದ ಒಳಚರಂಡಿ ನಿರ್ವಹಣೆಗೆ ವಾಷಿರ್ಕ 3.54 ಕೋಟಿ ಪಾವತಿಸುವ ನಕಲಿ ಠರಾವು ಪ್ರಕರಣ ಮಾಸುವ ಮುನ್ನವೇ 3.37 ಕೋಟಿ ಮೊತ್ತದ 45 ಕಾಮಗಾರಿ ಹಂಚಿಕೆಯ ವಿಷಯ ನಗರಸಭೆ ಆವರಣದಲ್ಲಿ ಗಂಭೀರ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಬಿಜೆಪಿಯ ಅಧಿಕಾರ ಇದ್ದರೂ ಕಾಂಗ್ರೆಸ್ ವಾರ್ಡ್ಗಳಿಗೆ ಮಾನ್ಯತೆ ನಿಡಲಾಗುತ್ತಿದೆ ಎಂದು ಹಲವು ಬಿಜೆಪಿ ಸದಸ್ಯರೇ ಮಾಡಿರುವ ಆರೋಪದಿಂದ ಬಿಜೆಪಿಯ ಅಂಗಳದಲ್ಲಿ ಮತ್ತೆ ಒಡಕಿನ ವಾತಾವರಣ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ, ಗದಗ ಕ್ಷೇತ್ರದಲ್ಲಿ ಸಚಿವ ಎಚ್.ಕೆ. ಪಾಟೀಲ ಗೆಲವು ಸಾಧಿಸುತ್ತಿದ್ದಂತೆ ಗದಗ ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರವಿದ್ದರೂ ಕಾಂಗ್ರೆಸ್ ಕೈಯಲ್ಲಿ ಆಡಳಿತವಿದೆ ಎಂಬುದು ಇತ್ತೀಚೆಗೆ ಕರೆದ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಟೆಂಡರ್ ಪ್ರಕ್ರಿಯೆಯಿಂದ ನಗರಸಭೆಯ ಬಜೆಪಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಒಳಮುನಿಸು ಶುರುವಾಗಿದ್ದು, ಕೆಲ ಸದಸ್ಯರು ಪ್ರತ್ಯೇಕ ಸಭೆ ನಡೆಸುವ ಮೂಲಕ ಅಧ್ಯಕ್ಷರ ನಡೆಯ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಇದ್ದರೂ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಅಧಿಕ ಕಾಮಗಾರಿ ಹಂಚಿಕೆ ಮಾಡಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ. ವಿರೊಧ ಪಕ್ಷದ ಕಾಂಗ್ರೆಸ್ ನಾಯಕರ ಜತೆ ಶಾಮೀಲಾಗಿ 17 ಸದಸ್ಯರು ಇರುವ ಬಿಜೆಪಿಗೆ ಕೇವಲ 17 ಕಾಮಗಾರಿ, 16 ಸದಸ್ಯರು ಇರುವ ಕಾಂಗ್ರೆಸ್ಸಿಗೆ 28 ಕಾಮಗಾರಿಗೆ ಟೆಂಡರ್ ಕರೆಯಲು ನಗರಸಭೆ ಅಧ್ಯೆ ಉಷಾ ದಾಸರ ಅನುಮತಿ ನೀಡಿದ್ದಾ ಎಂದು ಹಲವು ಬಿಜೆಪಿ ಸದಸ್ಯರು ಮುನಿಸಿಕೊಂಡಿದ್ದಾರೆ. ಕಾಂಗ್ರೆಸ್ ಜತೆಗಿನ ಹೊಂದಾಣಿಕೆ ರಾಜಕಾರಣ ಎಂದು ಆರೋಪಿಸಿರುವ ಸದಸ್ಯರು ಈ ಬಗ್ಗೆ ಬಿಜೆಪಿ ಜಿಲ್ಲಾ ಮುಖಂಡರಿಗೆ, ಹೈಕಮಾಂಡ್ಗೆ ದೂರು ನೀಡಲು ಮುಂದಾಗಿದ್ದಾರೆ. ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಆರೋಪವನ್ನು ತಳ್ಳಿ ಹಾಕಿರುವ ಅಧ್ಯೆ ಉಷಾ ದಾಸರ ಕಾಮಗಾರಿಗಳನ್ನು ಪಡೆಯಬೇಕೆಂಬ ಉತ್ಸಾಹಿ ಸದಸ್ಯರಿಗೆ ಕಾಮಗಾರಿ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಏನಿದು ಆರೋಪ?
ನಗರಸಭೆ ಸಾಮಾನ್ಯ ನಿಧಿಯಿಂದ ನಗರದ ವಿವಿಧ ವಾರ್ಡ್ಗಳಿಗೆ ರಸ್ತೆ, ಚರಂಡಿ ನಿರ್ಮಾಣ, ್ಲೇವರ್ಸ್ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲು ಕಳೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಗಿತ್ತು. ಅದರಂತೆ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ವಿವಿಧ ಕಾಮಗಾರಿಗೆ ಅನುಮತಿ ನೀಡಲು ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಅಧಿಕ ಮೊತ್ತದ, ಅಧಿಕ ಕಾಮಗಾರಿಗೆ ಅನುಮತಿ ದೊರೆತಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದರೂ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಅಧಿಕ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ ಎಮದು ಈ ಮೊದಲಿನಿಂದಲೂ ಆರೋಪ ಕೇಳಿಬರುತ್ತಿದ್ದು, ಪ್ರಸಕ್ತ ಬೆಳವಣಿಗೆ ಆರೋಪವನ್ನು ಪುಷ್ಟಿಕರಿಸುವಂತಿದೆ.
ಕಾಂಗ್ರೆಸ್ಸಿಗೆ ಮಣೆ?
ನಗರಸಭೆ ಪ್ರತಿಪಕ್ಷದ ನಾಯಕ ಎಲ್.ಡಿ. ಚಂದಾವರಿ ಪ್ರತಿನಿಧಿಸುವ 29 ವಾರ್ಡ್ನಲ್ಲಿ ವಿವಿಧ 3 ಕಾಗಮಾರಿಗಳಿಗೆ ಸಂಬಂಧಿಸಿದಂತೆ 48 ಲಕ್ಷ ಮೊತ್ತದ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ. ಹಾಗೆಯೇ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ ನಂ 1 ರಲ್ಲಿ 16.75 ಲಕ್ಷಕ್ಕೆ, ವಾರ್ಡ್ ನಂ 8ಕ್ಕೆ 19.53 ಲಕ್ಷ, ವಾರ್ಡ್ 9 ಕ್ಕೆ 19.96 ಲಕ್ಷ, ವಾರ್ಡ್ ನಂ 18ಕ್ಕೆ 25 ಲಕ್ಷ, ವಾರ್ಡ್ ನಂ 21ಕ್ಕೆ 17.25 ಲಕ್ಷ ಹೀಗೆ ಅಧಿಕ ಮೊತ್ತದ ಕಾಮಗಾರಿ ಕಾಂಗ್ರೆಸ್ ಪಾಲಾಗಿದ್ದು ಬಿಜೆಪಿಯ ಹಲವು ಸದಸ್ಯರ ಕೆಂಗೆಣ್ಣಿಗೆ ಗುರಿಯಾಗಿದೆ.
ಠರಾವು ಪ್ರಕರಣ ಏನು?
ಕಳೆದ ವರ್ಷ ಇದೇ ಜೂನ್ ತಿಂಗಳಲ್ಲಿ 3.54 ಕೋಟಿ ಮೊತ್ತದ ಒಳಚರಂಡಿ ನಿರ್ವಹಣೆಯ ನಕಲಿ ಠರಾವು ಪ್ರಕರಣ ಬೆಳಕಿಗೆ ಬಂದು ಬಿಜೆಪಿ ಸದಸ್ಯರಲ್ಲಿ ಮುಜಗುರು ಉಮಟು ಮಾಡಿತ್ತು. ಅಧ್ಯಕ್ಷರ ವಿರುದ್ಧವೇ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ರದ್ದಾದ ಠರಾವಿಗೆ ಮತ್ತೊಮ್ಮೆ ಅನುಮತಿ ನೀಡುವ ಠರಾವು ಇದಾಗಿತ್ತು. ಈಗ ಮತ್ತೊಮ್ಮೆ ಬಿಜೆಪಿ ಸದಸ್ಯರ ನಡುವೆಯೇ ಒಳಬೇಗುದಿ ಶುರುವಾಗಿದೆ. ಜಿಲ್ಲಾ ಬಿಜೆಪಿ ಮುಖಂಡರು ಈ ಮುನಿಸು ತಣ್ಣಗಾಗಿಸುವಲ್ಲಿ ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
ಕೋಟ್:
ಕೆಲ ವಾರ್ಡ್ಗಳಿಗೆ ಹೆಚ್ಚು, ಇನ್ನೂ ಕೆಲ ವಾರ್ಡ್ಗಳಿಗೆ ಕಡಿಮೆ ಕಡಿಮೆ ಕಾಮಗಾರಿ ಎಂದು ಬೇಧ ಮಾಡಿಲ್ಲ. ಈ ಹಿಮದೆ ಯಾವುದೇ ದುರುದ್ದೇಶವಿಲ್ಲ. ಅಭಿವೃದ್ಧಿ ಕೆಲದ ಅಗತ್ಯ ಇರುವ ಕಡೆ ಮತ್ತು ಆಸಕ್ತಿ ವಹಿಸಿದ ಸದಸ್ಯರ ವಾರ್ಡ್ಗಳಿಗೆ ಕಾಮಗಾರಿ ನೀಡಲಾಗಿದೆ.
-ಉಷಾ ದಾಸರ, ನಗರಸಭೆ ಅಧ್ಯಕ್ಷರು.
ಕೋಟ್:
ಬಿಜೆಪಿ ಆಡಳಿತವಿದ್ದರೂ ಬಿಜೆಪಿಯ ಹಲವು ಸದಸ್ಯರು, ಪ್ರಭಾವಿ ನಾಯಕರು ಕಾಂಗ್ರೆಸ್ಸಿನ ಜತೆ ಒಳ ಶಾಮೀಲಾಗಿದ್ದಾರೆ. ಇಂದಿನ ಆಡಳಿತ ವ್ಯವಸ್ಥೆ ಗಮನಿಸಿದರೆ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟರೆ ಇನ್ನೂ ಉತ್ತಮ ಅನಿಸುತ್ತಿದೆ.
- ಹೆಸರು ಹೇಳಲು ಇಚ್ಚಿಸದ ನಗರಸಭೆ ಸದಸ್ಯ