ಮನೆ ನಿರ್ಮಾಣಕ್ಕೆ ಅನುದಾನ ಮೀಸಲು: ಬಜೆಟ್ ಮಂಡಿಸಿದ ನಗರಸಭಾಧ್ಯಕ್ಷ ಎಚ್.ಎಸ್.ಮಂಜು

Cmc Budget)
Published on

ಮಂಡ್ಯ: ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆಂದು ನಿರ್ಮಾಣವಾಗುತ್ತಿರುವ ಜಿ+3 ಮಾದರಿ ಮನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ 86.40 ಲಕ್ಷ ರೂ ಅನುದಾನ ಮೀಸಲಿಡಲಾಗಿದೆ. ಜತೆಗೆ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ಪರಿಹಾರ ಪಾವತಿ, ಸ್ವಚ್ಛತಾ ಕಾರ್ಯ ನಿರ್ವಹಿಸುವವರಿಗೆ ಬೆಳಗಿನ ಉಪಹಾರ ನೀಡಲು 128 ಲಕ್ಷ ರೂ ನೀಡಲಾಗಿದೆ.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮಂಡಿಸಿದ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಗೃಹಭಾಗ್ಯ ಯೋಜನೆಯಡಿ 16 ಪೌರಕಾರ್ಮಿಕರಿಗೆಂದು 2ನೇ ಹಂತದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅದನ್ನು ಪೂರ್ಣಗೊಳಿಸಲು ಹಣ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಈ ಸಾಲಿನಲ್ಲಿ ನಗರಸಭೆಯ ಸ್ವಂತ ಸಂಪನ್ಮೂಲದಿಂದ 21.33 ಕೋಟಿ ರೂನಷ್ಟು ನಿರೀಕ್ಷಿತ ಆದಾಯ ನಿರೀಕ್ಷಿಸಲಾಗಿದೆ. ಅಂತೆಯೇ ಸರ್ಕಾರದಿಂದ 38.49 ಕೋಟಿ ರೂ ಅನುದಾನ ನಿರೀಕ್ಷಿಸಲಾಗಿದೆ. ಪ್ರಮುಖವಾಗಿ ಆಸ್ತಿ ತೆರಿಗೆ, ದಂಡ ಮತ್ತು ಕರಗಳ ಸಂಗ್ರಹಣೆಯಿಂದ 1405 ಲಕ್ಷ ರೂ, ಅಭಿವೃದ್ಧಿ ಮತ್ತು ಬೆಟರ್‌ಮೆಂಟ್ ಶುಲ್ಕ ಸಂಗ್ರಹದಿಂದ 155 ಲಕ್ಷ ರೂ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ 140 ಲಕ್ಷ ರೂ, ಮಳಿಗೆ ಠೇವಣಿ, ಬಾಡಿಗೆ ಮತ್ತು ದಂಡ ವಸೂಲಿಯಿಂದ 93.10 ಲಕ್ಷ ರೂ, ಒಳಚರಂಡಿ ಸಂಪರ್ಕ ಮತ್ತು ಬಳಕೆದಾರರ ಶುಲ್ಕ ಸಂಗ್ರಹದಿಂದ 52.50 ಲಕ್ಷ ರೂ, ಉದ್ದಿಮೆ ಪರವಾನಗಿ ಶುಲ್ಕ ಮತ್ತು ದಂಡ ಸಂಗ್ರಹದಿಂದ 51 ಲಕ್ಷ ರೂ, ಅನುಪಯುಕ್ತ ವಸ್ತು ಮಾರಾಟದಿಂದ 40 ಲಕ್ಷ ರೂ, ರಸ್ತೆ ಅಗೆತ ಮತ್ತು ಪುನಃಸ್ಥಾಪನೆ ಶುಲ್ಕಸಂಗ್ರಹದಿಂದ 33.10 ಲಕ್ಷ ರೂ, ಖಾತೆಗಳ ಬದಲಾವಣೆ ಶುಲ್ಕ 28 ಲಕ್ಷ ರೂ, ನಗರಸಭೆ ವಸತಿ ಗೃಹಗಳು ಹಾಗೂ ಹಳೇ ಕಚೇರಿ ಕಟ್ಟಡ ಬಾಡಿಗೆಯಿಂದ 22 ಲಕ್ಷ ರೂ, ಕಟ್ಟಡ ಪರವಾನಗಿ ಶುಲ್ಕದಿಂದ 21.50 ಲಕ್ಷ ರೂ, ಇತರೆ ಪ್ರಮಾಣ ಪತ್ರಗಳು, ದಂಡ ಹಾಗೂ ಶುಲ್ಕಗಳಿಂದ 20.68 ಲಕ್ಷ ರೂ, ರಾಜ್ಯ ಸರ್ಕಾರದಿಂದ ಸಂಗ್ರಹಿಸಲ್ಪಟ್ಟ ಸ್ಟ್ಯಾಂಪ್ ಶುಲ್ಕದಿಂದ 12 ಲಕ್ಷ ರೂ, ಬ್ಯಾಂಕ್ ಭದ್ರತಾ ಠೇವಣಿ ಮತ್ತು ಖಾತೆಗಳ ಮೇಲಿನ ಬಡ್ಡಿ ಸಂಗ್ರಹದಿಂದ 10 ಲಕ್ಷ ರೂ, ಜಾಹೀರಾತು ತೆರಿಗೆಯಿಂದ 6.50 ಲಕ್ಷ ರೂ, ಟ್ಯಾಕ್ಸಿ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದ ನೆಲ ಬಾಡಿಗೆ ಮತ್ತು ಕಸಾಯಿಖಾನೆ ಶುಲ್ಕದಿಂದ 5 ಲಕ್ಷ ರೂ, ಸಾರ್ವಜನಿಕ ಶೌಚಗೃಹ ನಿರ್ವಹಣೆಯಿಂದ 5 ಲಕ್ಷ ರೂ, ಮಾರುಕಟ್ಟೆ ಶುಲ್ಕದಿಂದ 2.88 ಲಕ್ಷ ರೂ, ಆಸ್ತಿ ತೆರಿಗೆಯಿಂದ ವಸೂಲಾಗುವ ಕರಗಳು/ಗುತ್ತಿಗೆದಾರರು/ಸರಬರಾಜುದಾರು ಹಾಗೂ ನೌಕರರ ವೇತನದ ಕಟಾವಣೆಗಳಿಂದ 683.90 ಲಕ್ಷ ರೂ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಇದರ ಜತೆಗೆ ಎಸ್‌ಎಫ್‌ಸಿ ವಿದ್ಯುತ್ ಅನುದಾನದಿಂದ 1467 ಲಕ್ಷ ರೂ, ಎಸ್‌ಎಫ್‌ಸಿ ವೇತನ ಅನುದಾನ ಹಾಗೂ ಪಿಂಚಣಿ ವಂತಿಕೆ ಅನುದಾನ 850 ಲಕ್ಷ ರೂ, 15ನೇ ಹಣಕಾಸು ಯೋಜನೆ ಅನುದಾನ 560 ಲಕ್ಷ ರೂ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ನೆಲಭರ್ತಿ ಜಾಗದಲ್ಲಿನ ಪಾರಂಪಾರಿಕ ತ್ಯಾಜ್ಯ ವಿಲೇವಾರಿ, ತ್ಯಾಜ್ಯ ವಶ ಸೌಲಭ್ಯ ಕಲ್ಪಿಸಲು ಹಾಘೂ ಐಇಸಿ ಚಟುವಟಿಕೆಗೆ ಸರ್ಕಾರದಿಂದ ಬರುವ ಅನುದಾನ 496.24 ಲಕ್ಷ ರೂ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 254 ಲಕ್ಷ ರೂ ಮತ್ತು ವಿಶೇಷ ಅನುದಾನ 100 ಲಕ್ಷ ರೂ, ಜನಗಣತಿ ಅನುದಾನ 5 ಲಕ್ಷ ರೂ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಮೀನಾಕ್ಷಿ, ಪೌರಾಯುಕ್ತ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net