ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರದ್ಧಾ ಭಕ್ತಿಯ ಸೇವೆ: ಕುಕ್ಕೆನಾಥನಿಗೆ ಪಂಚಾಮೃತ ಮಹಾಭಿಷೇಕ

kukke
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನಾಗಪ್ರತಿಷ್ಠಾ ಮಂಟಪದ ನಾಗರಾಜನಿಗೆ ರಮೇಶ ನೂರಿತ್ತಾಯ ಕ್ಷೀರಾಭಿಷೇಕ ಮಾಡಿದರು.
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ನಾಗರಪಂಚಮಿಯನ್ನು ಪೂರ್ವ ಸಂಪ್ರದಾಯದಂತೆ ಆಚರಿಸಲಾಯಿತು.

ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳ ಅರ್ಚಕ ರಮೇಶ್ ನೂರಿತ್ತಾಯ, ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು. ಅಲ್ಲದೆ ವಿವಿಧ ವೈದಿಕ ವಿಧಿ-ವಿಧಾನ ನೆರವೇರಿಸಿ ಪ್ರಸಾದ ನೀಡಿದರು. ಪ್ರಾತಃಕಾಲ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ವಿಶೇಷ ಪಂಚಾಮೃತ ಮಹಾಭಿಷೇಕ ಮತ್ತು ಪ್ರಸನ್ನ ಪೂಜೆ ನೆರವೇರಿಸಿದರು.

ಭಕ್ತರಿಂದ ತನು ಸಮರ್ಪಣೆ

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾಪನಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತರು ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ತನುವಿನೊಂದಿಗೆ ಹಿಂಗಾರ, ಹಣ್ಣುಕಾಯಿ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು.

ಸಾಂಪ್ರದಾಯಿಕ ಅಲಂಕಾರ

ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಪ್ರಾಕೃತಿಕ ವಸ್ತುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಂಗಿನ ಗರಿಯ ಮಾಡು, ಫಲಪುಷ್ಪ ಅಲಂಕಾರದಿಂದ ನಾಗಪ್ರತಿಷ್ಠಾಪನಾ ಮಂಟಪ ಕಂಗೊಳಿಸುತ್ತಿತ್ತು. ದೇವಳವು ಹೂವಿನಿಂದ ಶೃಂಗಾರಗೊಂಡಿತ್ತು.

ಸೇವೆ ಸಮರ್ಪಣೆ

ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ, ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠಾಪನೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ನಾಗರಾಜನಿಗೆ ಪ್ರಿಯ ಅಕ್ಕಿ ಮತ್ತು ಹಾಲಿನ ಪಾಯಸದ ಭೋಜನ ಪ್ರಸಾದ ವಿತರಿಸಲಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತ ಉದಯಕುಮಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್.ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ವಿಶೇಷ ಅರಿಶಿಣ ಪ್ರಸಾದ

ಕುಕ್ಕೆಯಲ್ಲಿ ನಾಗರಪಂಚಮಿಯಂದು ಗಂಧ ಪ್ರಸಾದದೊಂದಿಗೆ ಹಾಲಿನ ಅಭಿಷೇಕದ ಹಾಲು ಮತ್ತು ವಿಶೇಷವಾಗಿ ನಾಗ ಪ್ರಿಯವಾದ ಅರಿಶಿಣ ಪ್ರಸಾದ ಹಾಗೂ ಕಂಡಸಾರಿ ಕೆಂಪು ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯ ವಿತರಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ತನು ಸಮರ್ಪಣೆ ಮಾಡಿ ಪ್ರಸಾದ ಸ್ವೀಕರಿಸಿದರು.

ಆಕಳ ಹಾಲಿಗೆ ಹೆಚ್ಚಿನ ಬೇಡಿಕೆ

ನಾಗರಪಂಚಮಿಯ ಪುಣ್ಯದಿನ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಇಲ್ಲಿನ ಪರಿಸರದಲ್ಲಿ ಮಳೆಯಾಗುವುದು ವಾಡಿಕೆ. ಆದರೆ ಈ ದಿನ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನ ನಂತರ ವಾಡಿಕೆಯಂತೆ ಸಾಧಾರಣ ಮಳೆಯಾಯಿತು. ನಾಗನಿಗೆ ಶುದ್ಧ ಆಕಳ ಹಾಲನ್ನು ಸಮರ್ಪಿಸುವುದು ವಾಡಿಕೆಯಾದುದರಿಂದ ಹಸುವಿನ ಹಾಲಿಗೆ ಹೆಚ್ಚಿನ ಬೇಡಿಕೆ ಕಂಡುಬಂತು.

ಸಾಂಪ್ರದಾಯಿಕ ಶೃಂಗಾರ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಾಗರಪಂಚಮಿ ಅಂಗವಾಗಿ ಶ್ರೀ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾಪನಾ ಮಂಟಪವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ತೆಂಗಿನ ಗರಿಯ ಮಾಡಿನ ಅಲಂಕಾರದೊಂದಿಗೆ ಹೂವಿನ ಶೃಂಗಾರದಿಂದ ನಾಗಪ್ರತಿಷ್ಠಾಪನಾ ಮಂಟಪ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿತ್ತು.

ನಾಗಪ್ರತಿಷ್ಠಾಪನಾ ಮಂಟಪ
ನಾಗಪ್ರತಿಷ್ಠಾಪನಾ ಮಂಟಪ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net