ನಾಗರಹೊಳೆಯಲ್ಲಿ ಹುಲಿ ಸಂಖ್ಯೆ ಹೆಚ್ಚಳ

14mdkf2 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡುವುದರೊಂದಿಗೆ ಹುಲಿ ಸಂರಕ್ಷಣೆಗೆ ಆದ್ಯತೆ ನೀಡಿದರ ಫಲವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ೧೯೯೮ ರಲ್ಲಿ ನಾಗರಹೊಳೆಯಲ್ಲಿ ೩೬ ಸಂಖ್ಯೆಯಲ್ಲಿದ್ದ ಹುಲಿಗಳ ಸಂಖ್ಯೆ ಪ್ರಸ್ತುತ ೧೧೨ಕ್ಕೆ ತಲುಪಿದೆ.

ಹುಲಿ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದಂತೆ ಉದ್ಯಾನವನ ದಂಚಿನಲ್ಲಿರುವ ಜನ- ಜಾನುವಾರು ಜೀವಕ್ಕೆ ಸಂಚಕಾರವಾಗಿದೆ. ವಿಶ್ವಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಹುಲಿ ಸಂಖ್ಯೆ ನಮ್ಮ ರಾಜ್ಯದ ನಾಗರಹೊಳೆಯಲ್ಲಿ ಹೆಚ್ಚಾಗಿರುವುದು ವನ್ಯಪ್ರೇಮಿಗಳ ಪಾಳಿಗೆ ಸಂತಸದ ವಿಚಾರ. ಆದರೆ, ಅರಣ್ಯದಂಚಿನ ಜನರ ಬದುಕು ಸೂಜಿ ಮೇಲಿನ ನಡಿಗೆಯಂತಾಗಿದೆ.

ನಾಗರಹೊಳೆಯಲ್ಲಿ ಮೂರು ದಶಕದ ಹಿಂದೆ ೧೪ ಚದರ ಅಡಿ ವ್ಯಾಪ್ತಿಯಲ್ಲಿ ಒಂದು ಹುಲಿ ಇರುತ್ತಿತ್ತು. ಈಗ ಕೇವಲ ೪ ಚದರ ಅಡಿಗೆ ಒಂದು ಹುಲಿ ಇರುವಂತಾಗಿದೆ. ಹುಲಿ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಯಸ್ಸಾದ, ಗಾಯಗೊಂಡ ಹುಲಿಗಳು ಅನಿವಾರ್ಯವಾಗಿ ಊರಿ ನತ್ತ ಧಾವಿಸುತ್ತಿವೆ. ಆಹಾರಕ್ಕಾಗಿ ಜಾನುವಾರು ಗಳ ಮೇಲೆ ದಾಳಿ ನಡೆಸುತ್ತವೆ. ಮನುಷ್ಯನ ರಕ್ತದ ರುಚಿ ನೋಡಿದ ಹುಲಿ ಮತ್ತೆ ಮನಷ್ಯನ ಮೇಲೆ ನಿರಂತರ ದಾಳಿ ನಡೆಸುತ್ತವೆ.

ಅಸಹಾಯಕ ಪರಿಸ್ಥಿತಿಗೆ ತಲುಪಿದ ಹುಲಿ ಆಹಾರಕ್ಕಾಗಿ ಜನ, ಜಾನುವಾರು ಮೇಲೆ ದಾಳಿ ನಡೆಸುತ್ತದೆ. ಹೀಗೆ ಒಮ್ಮೆ ದಾಳಿ ನಡೆಸಿದ ಹುಲಿ ಅಪಾಯಕಾರಿಯಾಗಲಿದೆ. ಅದನ್ನು ಸೆರೆಹಿಡಿಯುವ ಪ್ರಹಸನ ಮಾಡುವುದಕ್ಕಿಂತ ಕೊಂದು ಹಾಕುವುದು ಅತ್ಯಗತ್ಯ ಎಂದು ವಿಜಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಹುಲಿ ಬಗ್ಗೆ ಸಂಶೋಧನೆ ನಡೆಸಿರುವ ಪ್ರಖ್ಯಾತ ಪರಿಸರವಾದಿ ಉಲ್ಲಾಸ್ ಕಾರಂತ್ ಹೇಳುತ್ತಾರೆ.

ಚಿಕ್ಕಮಗಳೂರಿನಲ್ಲಿ ನರಭಕ್ಷಕ ಹುಲಿಯನ್ನು ಸೆರೆಹಿಡಿದು ಬೆಳಗಾವಿ ಭಾಗದಲ್ಲಿ ಬಿಟ್ಟಿರುವುದರಿಂದ ಅಲ್ಲಿನ ಜನ ಈಗಲೂ ಅಪಾಯ ಎದುರಿಸುತ್ತಿದ್ದಾರೆ. ಕೇರಳದ ವಯನಾಡಿನಲ್ಲಿ ಪ್ರಸ್ತುತ ೩ ಹುಲಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿದ್ದು, ಅದನ್ನು ಕೊಂದು ಹಾಕಲು ಸರ್ಕಾರ ಆದೇಶ ನೀಡುತ್ತಿಲ್ಲ ಎಂದು ಉಲ್ಲಾಸ್ ಕಾರಂತ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಅರಣ್ಯ ಇಲಾಖೆ ನರಭಕ್ಷಕ ಹುಲಿಯನ್ನು ತಕ್ಷಣ ಕೊಂದು ಹಾಕಬೇಕು. ಇಲ್ಲದಿದ್ದಲ್ಲಿ ಹುಲಿ ಮದುವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಸರ್ಕಾರದ ಗಮನ ಸೆಳೆದಿದ್ದರು. ಕೊಡಗಿನಲ್ಲಿ ಅನಾದಿ ಕಾಲದಲ್ಲಿ ಹುಲಿ ಬೇಟೆ ಮಾಡಿದವರಿಗೆ ಹುಲಿಯೊಂದಿಗೆ ಮದುವೆ ಮಾಡುವ ಸಂಪ್ರದಾಯವಿತ್ತು. ಅದನ್ನು ಶಾಸಕರು ಶಾಸನ ಸಭೆ ಯಲ್ಲಿ ನೆನಪಿಸಿದ್ದಾರೆ.

೨ ವರ್ಷದಲ್ಲಿ ೬ ಬಲಿ

ಕಳೆದೆರಡು ವರ್ಷದಲ್ಲಿ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ೬ ಜನ ಜೀವ ಕಳೆದುಕೊಂಡಿದ್ದಾರೆ. ಶ್ರೀಮಂಗಲ, ಬೆಳ್ಳೂರು, ರುದ್ರಗುಪ್ಪೆ, ಕೆ.ಬಾಡಗ ಗ್ರಾಮದಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಬೆಳ್ಳೂರಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾಗುತ್ತಿದ್ದಂತೆ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಸಿಡಿಸಿದ ಗುಂಡಿಗೆ ಹುಲಿ ಬಲಿಯಾಗಿತ್ತು.

**
ಹೊಂಚು ಹಾಕಿ ಮನುಷ್ಯನ ಮೇಲೆ ದಾಳಿ ಮಾಡುವ ಹುಲಿಯನ್ನು ಸೆರೆಹಿಡಿಯುವುದು ಪರಿಹಾರವಲ್ಲ. ಅದನ್ನು ಗುಂಡಿಕ್ಕಿ ಕೊಲ್ಲು ವುದು ಸೂಕ್ತ. ಹುಲಿ ಸಂಖ್ಯೆ ಮುಖ್ಯವಲ್ಲ. ಅಪಾಯಕಾರಿ ಹುಲಿಯನ್ನು ಅನಿವಾರ್ಯವಾಗಿ ಕೊಲ್ಲಬೇಕಾಗುತ್ತದೆ. ಈ ನಿರ್ಧಾರವನ್ನು ವನ್ಯಜೀವಿ ವಿಭಾಗದ ಪಿಸಿಸಿಎಫ್ ತೆಗೆದುಕೊಳ್ಳಬೇಕು. ಉಲ್ಲಾಸ್ ಕಾರಂತ್, ವನ್ಯಜೀವಿ ಸಂಶೋಧಕರು.

**
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲಿನ ೧ ಕಿಲೋಮೀಟರ್ ಪ್ರದೇಶ ಬಫರ್ ಝೋನ್‌ಗೆ ಬರುತ್ತದೆ. ಉದ್ಯಾನವನ ಹಾಗೂ ಬಫರ್ ಝೋನ್ ವ್ಯಾಪ್ತಿಯಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಈ ಸಮಸ್ಯೆ ಮುಂದೆಯೂ ಎದುರಾಗುತ್ತದೆ. ತಮ್ಮು ಪೂವಯ್ಯ, ಪರಿಸರವಾದಿ, ಮಡಿಕೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net