

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎನ್ನುವ ಕೂಗು ಹೆಚ್ಚುತ್ತಿರುವಾಗಲೇ ಅದೇ ವಿಚಾರಕ್ಕೆ ಸ್ಥಳೀಯರ ಜಗಳವೂ ಹೆಚ್ಚಾಗಿದೆ. ನಾಗರಬಾವಿಯಲ್ಲಿ ಬೀದಿ ನಾಯಿಗೆ ಟೆಕ್ಕಿ ಮಹಿಳೆ ಒಬ್ಬಳು ಊಟ ಹಾಕಿದ ವಿಚಾರಕ್ಕೆ ಜಗಳವಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನಾಗರಬಾವಿಯ ವಿನಾಯಕ ಲೇಔಟ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸತ್ಯಜಿತ್ ಎಂಬುವವರ ಪತ್ನಿ ಟೆಕ್ಕಿಯಾಗಿದ್ದು, ಮನೆಯಲ್ಲಿ ನಾಯಿ ಸಾಕಿದ್ದಾರೆ. ಪ್ರತಿದಿನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಬೀದಿ ನಾಯಿಗಳಿಗೂ ಊಟ ಹಾಕಿ ಬರುತ್ತಿದ್ದರಂತೆ. ಆದರೆ ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರಿಗೆ ಆ ನಾಯಿಗಳು ಕಚ್ಚಲು ಬರುತ್ತಿದ್ದವಂತೆ. ಆ ಸಿಟ್ಟಿನಿಂದಾಗಿ ಸ್ಥಳೀಯರು ಟೆಕ್ಕಿ ಮಹಿಳೆಯ ಜತೆ ಜಗಳವಾಡಿದ್ದಾರೆ.
ನಾಯಿಗೆ ಊಟ ಹಾಕಬೇಡಿ ಎಂದು ಸ್ಥಳೀಯರು ಮಹಿಳೆಗೆ ತಾಕೀತು ಮಾಡಿದ್ದಾರೆ. ಆದರೆ ಅದಕ್ಕೆ ಆಕೆ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಯುವಕನೋರ್ವ ಮಹಿಳೆಯ ಮೇಲೆ ಚಪ್ಪಲಿ ಎಸೆದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ