ಗದ್ದಲದಲ್ಲೇ ಮುಗಿದ ಸಾಮಾನ್ಯ ಸಭೆ - ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಚಕಮಕಿಯಿಂದ ಗೊಂದಲ

oppo_1024
oppo_1024
Published on

ಪುತ್ತೂರು: ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಗದ್ದಲ ಜೋರಾಗಿದ್ದು, ಅಧ್ಯಕ್ಷರು ಗದ್ದಲ ನಿಲ್ಲಿಸಲು ದೀರ್ಘಕಾಲ ಬೆಲ್ ಮಾಡಿ ಸಭೆಯನ್ನು ಅಂತ್ಯಗೊಳಿಸಿದರು.

ನಗರಸಭೆ ಸಾಮಾನ್ಯ ಸಭೆಯ ಕೊನೆಗೆ ಸದಸ್ಯ ಭಾಮಿ ಅಶೋಕ್ ಶೆಣೈ ಸಭೆ ಮುಗಿದರೆ ಧನ್ಯವಾದ ಹೇಳಿ ಎಂದಾಗ ಕಾಂಗ್ರೆಸ್ ಸದಸ್ಯೆ ಶೈಲಾ ಪೈ ಮಾತು ಪ್ರಾರಂಭಿಸಿದ್ದಾರೆ. ತನ್ನ ವಾರ್ಡ್‌ನಲ್ಲಿ ನಿವೇಶನವೊಂದರ ಬೇಲಿ ವಿಚಾರವನ್ನು ಪ್ರಸ್ತಾಪಿಸಿ, ತಮ್ಮ ಹೆಸರು ಸ್ಥಳದಲ್ಲಿ ಉಲ್ಲೇಖಿಸಿದ್ದು ಯಾಕೆ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು. ಸಭೆಯಲ್ಲಿ ಹೇಳುವುದನ್ನು ನೀವು ಮಾಡುವುದಾದರೆ ಸಭೆಯಲ್ಲಿ ನಾನು ಹೇಳಿದ ಅಭಿವೃದ್ಧಿ ಕಾರ್ಯವನ್ನು ಮಾಡಿ ಕೊಡಿ. ನಮ್ಮ ವಾರ್ಡ್‌ನಲ್ಲಿ ಎರಡು ದಿನದ ಒಳಗೆ ಸಂಕ ಸರಿ ಮಾಡಿಕೊಡಿ ಎಂದು ಆಗ್ರಹಿಸಿದರು.

ಈ ಕುರಿತು ಪೌರಾಯುಕ್ತರು ಯಾವುದೇ ಉತ್ತರ ನೀಡದೆ ಸುಮ್ಮನಿದ್ದರು. ಮಾತು ಮುಂದುವರಿಸಿದ ಶೈಲಾ ಪೈ ಅಧ್ಯಕ್ಷರನ್ನೂ ಪ್ರಶ್ನಿಸಿದರು ಮತ್ತು ಉಪಾಧ್ಯಕ್ಷರು ನಮಗೆ ತಾಳ್ಮೆ ತೆಗೆದುಕೊಳ್ಳಲು ಹೇಳುತ್ತಾರೆ. ನನಗೆ ಉಪಾಧ್ಯಕ್ಷರು ತಾಳ್ಮೆಯ ಉಪದೇಶ ಹೇಳುವುದು ಬೇಡ. ಮೊನ್ನೆ ಶಾಸಕರು ಬರುವಾಗ ತಡವಾಗುತ್ತದೆ ಎಂದು ನೀವೆಲ್ಲ ಎದ್ದು ಹೋದದ್ದು ಯಾಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ನೀವು ಪದೇಪದೆ ಉಪಾಧ್ಯಕ್ಷರನ್ನು ಯಾಕೆ ಟಾರ್ಗೆಟ್ ಮಾಡುವುದು ಎಂದು ಪ್ರಶ್ನಿಸಿದರು. ಸದಸ್ಯರಾದ ರಮೇಶ್ ರೈ, ಜೀವಂಧರ್ ಜೈನ್, ಭಾಮಿ ಅಶೋಕ್ ಶೆಣೈ ಧ್ವನಿಗೂಡಿಸಿದರು.

ಈ ವೇಳೆ ಶೈಲಾ ಪೈ ಪರವಾಗಿ ಕಾಂಗ್ರೆಸ್ ಸದಸ್ಯರಾದ ರೋಬಿನ್ ತಾವ್ರೋ, ಮಹಮ್ಮದ್ ರಿಯಾಝ್ ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಅಧ್ಯಕ್ಷರು ಒಂದು ಭಾರಿ ಬೆಲ್ ಒತ್ತಿ ಸಭೆಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದರು. ಯಾವುದೇ ಪ್ರಯೋಜವಾಗದ ಹಿನ್ನೆಲೆಯಲ್ಲಿ ಕೊನೆಗೆ ದೀರ್ಘ ಸಮಯ ಬೆಲ್ ಒತ್ತಿ ಸಭೆಯನ್ನೇ ಅಂತ್ಯಗೊಳಿಸಿದರು. ಈ ನಡುವೆ ನಾಮನಿರ್ದೇಶಿತ ಸದಸ್ಯ ಬಶೀರ್ ಅಹಮ್ಮದ್ ನಮಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿ ಸಾಮಾನ್ಯ ಸಭೆಯ ವಿಷಯ ಸೂಚಿ ಪತ್ರವನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ಕೆ.ಜೀವಂಧರ್ ಜೈನ್, ವಿದ್ಯಾ ಆರ್ ಗೌರಿ, ದಿನೇಶ್ ಶೇವಿರೆ, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮಾತ್ ಝೊರಾ, ಮೋಹಿನಿ ವಿಶ್ವನಾಥ ಗೌಡ, ರೋಬಿನ್ ತಾವ್ರೋ, ಪ್ರೇಂ ಕುಮಾರ್, ರಮೇಶ್ ರೈ, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಭಾಮಿ ಅಶೋಕ್ ಶೆಣೈ, ಯಶೋದ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ, ವಸಂತ ಕಾರೆಕ್ಕಾಡು, ಮಮತಾ ರಂಜನ್, ಬಿ.ಶೈಲಾ ಪೈ, ಇಸುಬು, ಮಹಮ್ಮದ್ ರಿಯಾಝ್ ಕೆ, ಪೂರ್ಣಿಮ ಕೋಡಿಯಡ್ಕ, ನಾಮನಿರ್ದೇಶಿತ ಸದಸ್ಯರಾದ ಶಾರದಾ ಅರಸ್, ಶೀಫ್ ಬಲ್ನಾಡು, ಬಶೀರ್ ಅಹಮ್ಮದ್, ರೋಶನ್ ರೈ ಬನ್ನೂರು ಸಹಿತ ನಗರಸಭೆ ಅಽಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net