ಸ್ವಚ್ಛತೆಗೆ ನೀಡಬೇಕು ಮೊದಲ ಆದ್ಯತೆ - ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ

PTR_9 JAN_2
Published on

ಪುತ್ತೂರು: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಗರದ ಸ್ವಚ್ಛತೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ಬೆಳೆಯುತ್ತಿರುವ ನಗರದಲ್ಲಿ ತ್ಯಾಜ್ಯ ಕೂಡಾ ಹೆಚ್ಚು ಉತ್ಪತ್ತಿಯಾಗುತ್ತಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲೇ ಬೇಕು. ೧೦ ವರ್ಷದ ಬಳಿಕ ಗ್ರಾಮೀಣ ಪ್ರದೇಶದಲ್ಲೂ ಕೂಡ ತ್ಯಾಜ್ಯ ಸಂಸ್ಕರಣಾ ಘಟಕ ಮಾಡುವ ಅವಶ್ಯಕತೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮಂಗಳವಾರ ಬನ್ನೂರು ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇಂದ್ರ, ರಾಜ್ಯ ಪುರಸ್ಕೃತ ಯೋಜನೆಯಡಿ ೭ ಕೋಟಿ ರೂ. ಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಬನ್ನೂರು ಡಂಪಿಂಗ್ ಯಾರ್ಡ್ ಹೇಳುವ ಬದಲು ಸಂಸ್ಕರಣಾ ಘಟಕ ಹೇಳುವಂತಾಗಿದೆ. ಬಯೋ ಸಿಎನ್‌ಜಿ ಘಟಕದ ನಿರ್ಮಾಣವಾಗಿದ್ದು, ಗ್ರಾಮೀಣ ಭಾಗದ ಮುಂಡೂರಿನಲ್ಲಿ ಎಂಆರ್‌ಪಿಎಲ್ ಘಟಕ ತೆರೆದಿದ್ದೇವೆ. ಮುಂದಿನ ದಿನ ವೇಸ್ಟ್ ಮೆನೇಜ್ ಮೆಂಟ್ ಹೋಗಿ ಆರ್ಥಿಕ ಲಾಭ ಇಟ್ಟುಕೊಂಡು ಕಂಪನಿಗಳು ಮುಂದೆ ಬರಲಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ನಾಗರಿಕರಿಗೆ ಸ್ವಚ್ಛ ಸುಂದರ ಹಸಿರು ಪರಿಸರವನ್ನು ನೀಡುವ ಯೋಜನೆ ನಗರಭೆಯದ್ದಾಗಿದೆ. ವೇಗವಾಗಿ ಬೆಳೆಯುತ್ತಿರುವ ಪುತ್ತೂರು ಮುಂದೆ ಜಿಲ್ಲಾ ಕೇಂದ್ರವಾಗುವ ಸಂದರ್ಭದಲ್ಲಿ ಅದಕ್ಕೆ ಪೂರಕವಾದ ವ್ಯವಸ್ಥೆ ಬೇಕಾಗಿದೆ. ಈ ನಿಟ್ಟಿನಲ್ಲಿ ನಗರಭೆಯಿಂದ ಹಲವು ಯೋಜನೆ ಜನರಿಗಾಗಿ ಮಾಡಲಾಗುತ್ತಿದೆ ಎಂದರು.

ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸದಸ್ಯರಾದ ಯುಸೂಪ್ ಡ್ರೀಮ್, ವಿದ್ಯಾ ಆರ್ ಗೌರಿ, ದೀಕ್ಷಾ ಪೈ, ಮೋಹಿನಿ ವಿಶ್ವನಾಥ ಗೌಡ, ಪೂರ್ಣಿಮ ಚೆನ್ನಪ್ಪ ಗೌಡ, ನಗರಸಭೆ ನಾಮನಿರ್ದೇಶಿತ ಸದಸ್ಯ ರೋಶನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಕಾರ್ಯಪಾಲಕ ಅಭಿಯಂತರ ಶಬರಿನಾಥ ಉಪಸ್ಥಿತರಿದ್ದರು.

ನಗರಸಭೆ ಸ್ಥಳೀಯ ಸದಸ್ಯೆ ಗೌರಿ ಬನ್ನೂರು ಸ್ವಾಗತಿಸಿದರು. ಪೌರಾಯುಕ್ತ ಮಧು ಮನೋಹರ್ ಪ್ರಾಸ್ತಾವನೆಗೈದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ನಿರೂಪಿಸಿದರು.

ವಿವಿಧ ಕಾಮಗಾರಿಗೆ ಶಿಲಾನ್ಯಾಸ

ಸ್ವಚ್ಛ ಭಾರತ ಮಿಷನ್ ೨.೦ ಯೋಜನೆಯಡಿ ೩. ೪೫ ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ, ೧.೬೮ ಕೋಟಿ ರೂ.ಯಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ, ೯.೬ ಲಕ್ಷ ರೂ.ಸ್ಯಾಟಿಟರಿ ಲ್ಯಾಂಡ್ ಫಿಲ್ಲಿಂಗ್ ಘಟಕ, ಸ್ವಚ್ಚ ಭಾರತ್ ಮಿಶನ್ ೧.೦ ರ ೩೬.೬೨ ಲಕ್ಷ ರೂ. ವೆಚ್ಚದಲ್ಲಿ ಎಸ್‌ಟಿಪಿ ಘಟಕ, ೧೫ನೇ ಹಣಕಾಸು ಯೋಜನೆಯ ೨೯ ಲಕ್ಷ ರೂ.ವೆಚ್ಚದಲ್ಲಿ ತಡೆಗೋಡೆ, ೩೬ ಲಕ್ಷ ರೂ.ಯಲ್ಲಿ ೪೦೦ ಕೆ.ವಿ. ಹೆಚ್ಚುವರಿ ವಿದ್ಯುತ್ ಕಾಮಾಗಾರಿ, ಅಮೃತ ನಗರೋತ್ಥಾನ ೪ರಲ್ಲಿ ೧.೨೨ ಕೋಟಿ ರೂ. ವೆಚ್ಚದಲ್ಲಿ ಪೌರಕಾರ್ಮಿಕರಿಗೆ ವಸತಿ ನಿರ್ಮಾಣ ಯೋಜನೆಗೆ ಶಿಲಾನ್ಯಾಸ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net