ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

upbr
Published on

ಉಪ್ಪಿನಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಾದ ಹನುಮನಕೊಪ್ಪ, ಕಲ್ಲೂರ, ಕೊಟಬಾಗಿ, ತಡಕೋಡ, ಪುಡಕಲಕಟ್ಟಿ, ಹನುಮನಾಳ, ಹಾರೋಬೆಳವಡಿ, ಕರಡಿಗುಡ್ಡ, ಅಮ್ಮಿನಬಾವಿ, ಯಾದವಾಡ ಗ್ರಾಮಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಮತ್ತು ಮಕ್ಕಳು ಭಾನುವಾರ ಸಂಭ್ರಮದಿಂದ ಆಚರಿಸಿದರು.

ಮಣ್ಣಿನಿಂದ ತಯಾರಿಸಿದ ನಾಗಪ್ಪನಿಗೆ ಮನೆಗಳಲ್ಲಿ ಹಾಲೆರೆದು ನೈವೇದ್ಯ ಮಾಡಿ ನಮಿಸಿದರು. ಗ್ರಾಮದ ಹೊರವಲಯದ ಹನುಮನಾಳ ರಸ್ತೆಯ ಬನ್ನಿಮಹಾಂಕಾಳಿ ದೇವಸ್ಥಾನದ ಬಳಿಯಿರುವ ನಾಗಪ್ಪನ ಮೂರ್ತಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು. ಹಿಂದಿನ ಕಾಲದಿಂದಲೂ ಪಂಚಮಿ ದಿನ ಮಣ್ಣಿನ ನಾಗಪ್ಪನನ್ನು ತಯಾರಿಸುತ್ತ ಬಂದಿರುವ ಬಡಿಗೇರ ಮನೆಯವರು ಈ ಬಾರಿಯೂ ಹನುಮನಕೊಪ್ಪದ ಕಲ್ಮೇಶ್ವರ ದೇವಸ್ಥಾನ ಮತ್ತು ಉಪ್ಪಿನಬೆಟಗೇರಿ ಹೊಸಪೇಟಿ ಓಣಿಯ ಬನಶಂಕರಿ ದೇವಸ್ಥಾನಗಳ ಮುಂದೆ ಬೃಹದಾಕಾರದ ಮಣ್ಣಿನ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿ, ಭಾವದಿಂದ ಪೂಜಿಸಿ, ಹಾಲೆರೆದರು.

ಪಂಚಮಿ ಅಂಗವಾಗಿ ಅಳ್ಳಿಟ್ಟು, ತಂಬಿಟ್ಟು, ಎಳ್ಳು, ಬುಂದಿ, ಶೇಂಗಾ ಸೇರಿದಂತೆ ವಿವಿಧ ಬಗೆಯ ಉಂಡಿಗಳು ಮತ್ತು ಜೋಳದಿಂದ ತಯಾರಿಸಿದ ಅಳ್ಳುಗಳನ್ನು ನಾಗಪ್ಪನಿಗೆ ನೈವೇದ್ಯ ಮಾಡಿದರು. ನಂತರ ಚಿಕ್ಕ ಮಕ್ಕಳು, ಮಹಿಳೆಯರು ಮನೆಗಳಲ್ಲಿ ಹಾಗೂ ಮರಗಳಿಗೆ ಕಟ್ಟಲಾದ ಜೋಕಾಲಿ ಆಡಿದರು. ವಿಶೇಷವಾಗಿ ಹೆಣ್ಣುಮಕ್ಕಳ ಹಬ್ಬವಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮ ಕಂಡುಬಂದಿತು.

ಉಪ್ಪಿನಬೆಟಗೇರಿ ಗ್ರಾಮದಲ್ಲಿ ಈ ಬಾರಿ ನಾಗಪಂಚಮಿ ಭಾವೈಕ್ಯಕ್ಕೆ ಸಾಕ್ಷಿಯಾಯಿತು. ಗ್ರಾಮದ ಹೊಸಪೇಟಿ ಓಣಿಯ ಶ್ರೀ ಬನಶಂಕರಿದೇವಿ ದೇವಸ್ಥಾನ ಹಾಗೂ ಹೊಸಪೇಟಿ ಮಠದ ಮುಂದೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದ ಮಣ್ಣಿನ ನಾಗರ ಮೂರ್ತಿಗೆ ಮುಸ್ಲಿಂ ಮಹಿಳೆಯರು ಮಕ್ಕಳ ಜತೆಗೆ ಆಗಮಿಸಿ, ಹಾಲು ಎರೆದು ಭಕ್ತಿಯಿಂದ ನಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net