

ಬೆಂಗಳೂರು: ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುವ ಮೊದಲ ಹಬ್ಬ ನಾಗರಪಂಚಮಿಯನ್ನು ನಗರದಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ದಿನ ಮಡಿಯುಟ್ಟು, ಉಪವಾಸದಿಂದ ಲಾದಿ ನೈವೇದ್ಯ ಸಹಿತ ನಾಗ ದೇವರನ್ನು ಆರಾಧಿಸುವ ಸಂಪ್ರದಾಯವಿದೆ. ಇದರಿಂದ ನಾಗದೇವರು ಸಂತುಷ್ಟಗೊಂಡು ಸಕಲ ತೊಂದರೆಗಳನ್ನು ನಿವಾರಿಸುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಮುಂಜಾನೆಯೇ ಕುಟುಂಬಸಮೇತರಾಗಿ ನಗರದ ಅಶ್ವತ್ಥ ಕಟ್ಟೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನೂ ಕೆಲವರು ಹುತ್ತಗಳಿಗೆ ಹಾಲೆರದು ಪೂಜೆ ಸಲ್ಲಿಸಿದರು. ಹಲವರು ಈ ದಿನವನ್ನು ಅಣ್ಣ-ತಂಗಿ ಹಬ್ಬವೆಂದು ಆಚರಿಸುತ್ತಾರೆ.
ಬಗೆ ಬಗೆಯ ತಿನಿಸು: ನಾಗರಪಂಚಮಿ ಸಲುವಾಗಿ ನುಚ್ಚಿನುಂಡೆ, ಗುಳ್ಳಡಿಕೆ, ಎಳ್ಳುಂಡೆ, ಶೇಂಗಾ ಉಂಡೆ, ಪುರಿ ಉಂಡೆ ಹೀಗೆ ನಾನಾ ಸಿಹಿ ತಿನಿಸುಗಳನ್ನು ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿದರು.
ಸಾಲು ಸಾಲು ಹಬ್ಬಗಳು: ನಾಗರಪಂಚಮಿಯೊಂದಿಗೆ ಆರಂಭವಾಗಿ ರಕ್ಷಾಬಂಧನ, ವರಮಹಾಲಕ್ಷ್ಮೀ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗೌರಿ ಹಬ್ಬ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ.