

ರಾಯಚೂರು ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ನಗರ ಸೇರಿ ಜಿಲ್ಲಾಧ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ನಾಗರ ಪಂಚಮಿ ನಿಮಿತ್ತ ಮಹಿಳೆಯರು ಮನೆಯ ಅಂಗಳದಲ್ಲಿ ನಾಗರ ಹಾವಿನ ಬಗೆ ಬಗೆಯ ರಂಗೋಲಿ ಹಾಕಿದ್ದರು. ಹೊಸಬಟ್ಟೆ ಧರಿಸಿದ್ದ ಮಹಿಳೆಯರು, ಮಕ್ಕಳು ವಿವಿಧ ದೇವಸ್ಥಾನಗಳಲ್ಲಿನ ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ತೆರಳಿ ನಾಗಮೂರ್ತಿ ಹಾಗೂ ಹುತ್ತಗಳಿಗೆ ಶ್ರದ್ಧೆ-ಭಕ್ತಿಯಿಂದ ಪೂಜೆ ಮಾಡಿ ಹಾಲೆರೆದರು.
ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹುತ್ತ, ನಾಗಮೂರ್ತಿಗಳಿಗೆ ಹಾಲೆರೆದು ಸಂಭ್ರಮಿಸಿದರು. ನಂತರ ಹಬ್ಬಕ್ಕೆಂದು ಮಾಡಿದ್ದ ಶೇಂಗಾ ಉಂಡೆ, ಎಳ್ಳುಂಡೆ, ರವೆ ಉಂಡೆ, ಬೇಸನ್ ಲಾಡು ಹಾಗೂ ಗಾರಿಗೆಯನ್ನು ಮನೆ ಮಂದಿ ಒಟ್ಟಿಗೆ ಕುಳಿತು ಭೋಜನ ಸವಿದರು. ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರೆ, ಯುವತಿಯರು, ಮಕ್ಕಳು ಜೋಕಾಲಿ ಆಡಿ ಖುಷಿಪಟ್ಟರು.