ನಿಜ ನಾಗರ ಅಮಾವಾಸ್ಯೆ, ಅಮರೇಶ್ವರ ದರ್ಶನಕ್ಕೆ ಭಕ್ತರು ದೌಡು

AMARESHWARA
ಲಿಂಗಸುಗೂರು ಸಮೀಪದ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು.
Published on

ಲಿಂಗಸುಗೂರು: ಹಿಂದು ಸಂಪ್ರದಾಯದಲ್ಲಿ ಶ್ರಾವಣ ಹಬ್ಬ ಹರಿದಿನಗಳ ಮಾಸವಾಗಿದ್ದು, ಇದರ ಆರಂಭಕ್ಕೆ ಮುನ್ನುಡಿ ಬರೆಯುವ ನಿಜ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಅಮರೇಶ್ವರ ಸುಕ್ಷೇತ್ರಕ್ಕೆ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಅಮರೇಶ್ವರನ ದರ್ಶನ ಪಡೆದ ದೃಶ್ಯ ಬುಧವಾರ ಕಂಡು ಬಂದಿತು.

ಶ್ರಾವಣ ಮಾಸದ ಆರಂಭದಿಂದ ಅಂತ್ಯದವರೆಗೆ ಹಬ್ಬಹರಿದಿನಗಳು, ಮಠ ಮಂದಿರಗಳಲ್ಲಿ ಪುರಾಣ-ಪ್ರವಚನ, ನಾನಾ ವ್ರತಗಳು ಹೆಚ್ಚಾಗಿ ನಡೆಯುತ್ತವೆ. ಈ ಮಾಸದಲ್ಲಿ ಏಕಭುಕ್ತವ್ರತ, ಮಂಗಳಗೌರಿ ವ್ರತ, ಬೃಹಸ್ಪತಿ ವ್ರತ, ಜೀವಂತಿಕಾ ವ್ರತ, ಶನೈಶ್ಚರ ವ್ರತ, ರೋಟಿಕಾ ವ್ರತ, ದೂರ್ವಾಗಣಪತಿ ವ್ರತ, ಆನಂದ ವ್ರತ, ನಾಗಚತುರ್ಥಿ, ಗರುಢ ಪಂಚಮಿ, ಸಿರಿಯಾಳ ಷಷ್ಟಿ, ಅವ್ಯಂಗ ವ್ರತ, ಶೀತಲ ಸಪ್ತಮಿ ವ್ರತ, ಪುತ್ರದಾ ಏಕಾದಶಿ ವ್ರತ, ಪವಿತ್ರಾರೋಹಣ ವ್ರತ, ದುರ್ಗಾಷ್ಟಮಿ, ಕೃಷ್ಣಾಷ್ಟಮಿ, ವಾಮನ ಜಯಂತಿ, ಅಗಸ್ತ್ಯಾರ್ಘ್ಯ, ವರಮಹಾಲಕ್ಷ್ಮೀ ವ್ರತ, ರಕ್ಷಾ ಬಂಧನ ಸೇರಿದಂತೆ ಅನೇಕ ಹಬ್ಬಗಳು, ವ್ರತಗಳು ಬರುತ್ತವೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಆಷಾಢ ಮಾಸದ ಬಳಿಕ ಬರುವ ಶ್ರಾವಣ ಮಾಸವು ಈ ವರ್ಷ ಸುಳ್ಳು ಮಾಸವಾಗಿದ್ದರಿಂದ ತಿಂಗಳ ತಡವಾಗಿ ನಿಜ ಶ್ರಾವಣಮಾಸ ಆರಂಭಗೊಂಡಿದೆ. ನಿಜ ನಾಗರ ಅಮಾವಾಸ್ಯೆ ಪ್ರಯುಕ್ತ ಭಕ್ತರು ಮಠ, ಮಂದಿರಗಳು, ತೀರ್ಥ ಕ್ಷೇತ್ರಗಳಿಗೆ ತೆರಳಿ ದೇವರ ಮತ್ತು ಗುರುಗಳ ದರ್ಶನ ಪಡೆಯುವುದು ಸಾಮಾನ್ಯವಾಗಿದ್ದು, ಅದರಂತೆ ಸುಕ್ಷೇತ್ರ ಅಮರೇಶ್ವರಕ್ಕೆ ಭಕ್ತರು ಆಗಮಿಸಿ ಹೊಂಡದಲ್ಲಿ ಪುಣ್ಯಸ್ನಾನ ಗೈದು, ಕಾಯಿ ಕರ್ಪೂರ ಅರ್ಪಿಸಿ ಸರದಿ ಸಾಲಿನಲ್ಲಿ ನಿಂತು ಅಮರೇಶ್ವರ ದೇವರು ಮತ್ತು ಅಮರೇಶ್ವರ ಅಭಿನವ ಗುರುಗಜದಂಡ ಸ್ವಾಮೀಜಿಗಳ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net