ಶ್ರದ್ಧಾ ಭಕ್ತಿಯ ನಾಗರ ಪಂಚಮಿ ಆಚರಣೆ

9 ckm 4
ಚಿಕ್ಕಮಗಳೂರು ನಗರದಲ್ಲಿ ನಾಗಪಂಚಮಿ ಅಂಗವಾಗಿ ಭಕ್ತರು ನಾಗರ ಕಲ್ಲಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.
Published on

ಚಿಕ್ಕಮಗಳೂರು: ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬವನ್ನು ಭಕ್ತರು ಆಚರಿಸಿದರು. ಅರಳಿಕಟ್ಟೆಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಶ್ರಾವಣ ಶುದ್ಧ ಪಂಚಮಿಯ ದಿನ ಬರುವ ನಾಗರಪಂಚಮಿಯAದು ನಾಗನಕಲ್ಲು, ಹುತ್ತ, ಮನೆಗೆ ತಂದ ಹುತ್ತದ ಮಣ್ಣು, ರಂಗೋಲಿ, ಅಕ್ಕಿ ಹಿಟ್ಟಿನಿಂದ ತಯಾರಿಸಿದ ನಾಗರ ಹಾವಿನ ಚಿತ್ರಗಳಿಗೆ ಶ್ರದ್ಧಾ ಭಕ್ತಿಯಿಂದ ಹಾಲೆರೆಯುವುದು ಸಂಪ್ರದಾಯ. ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ನೈವೇದ್ಯ ತಯಾರಿಸುವುದು ಈ ಹಬ್ಬದ ವಿಶೇಷ.
ಹುತ್ತಕ್ಕೆ ಹಾಲೆರೆಯುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ನಂಬಿಕೆ. ಹೀಗಾಗಿಯೇ ಮಹಿಳೆಯರು ಹೆಚ್ಚು ಸಂಭ್ರಮದಿAದ ಹಬ್ಬ ಆಚರಿಸುತ್ತಾರೆ. ಜತೆಗೆ ಸಾಮಾನ್ಯವಾಗಿ ಜ್ಯೇಷ್ಠ-ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಇದೇ ವೇಳೆ ಬೆಳೆದ ಪೈರನ್ನು ಇಲಿಗಳು ತಿಂದು, ಹಾನಿಯನ್ನುಂಟು ಮಾಡುತ್ತಿದ್ದರೆ, ಹಾವುಗಳು ಈ ಇಲಿಗಳನ್ನು ತಿನ್ನುವ ಮೂಲಕ ರೈತನಿಗೆ ನೆರವಾಗುತ್ತವೆ ಎನ್ನುವ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿ ವಿಶೇಷವಾಗಿ ಆಚರಿಸಲ್ಪಡುತ್ತದೆ.
ನಗರದ ಶ್ರೀಬೋಳರಾಮೇಶ್ವರ ದೇವಾಲಯ ಆವರಣದಲ್ಲಿರುವ ನಾಗನಕಲ್ಲುಗಳಿಗೆ ಮಹಿಳೆಯರು, ಮಕ್ಕಳಾದಿಯಾಗಿ ತನಿ ಎರೆದು ಪೂಜೆ ಸಲ್ಲಿಸಿದರು. ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಅರಳಿಕಟ್ಟೆಯ ನಾಗನಕಲ್ಲುಗಳಿಗೆ ಭಕ್ತರು ಹಾಲೆರೆದು ಪೂಜೆ ಸಲ್ಲಿಸಿ ನಾಗದೇವರನ್ನು ಭಕ್ತಿಯಿಂದ ಸ್ಮರಿಸಿದರು. ರತ್ನಗಿರಿ ರಸ್ತೆಯ ಜಿಎಸ್‌ಬಿ ರಾಮಮಂದಿರದಲ್ಲಿ ನಾಗರಪಂಚಮಿ ಪ್ರಯುಕ್ತ ದೇವರಿಗೆ ಹಾಲು ಹಾಗೂ ಎಳನೀರು ಅಭಿಷೇಕ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net