

ಅಂಕೋಲಾ: ಪುರಸಭೆ ವಾರ್ಡ್ ನಂ. 14ಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಗಪ್ಪ ಗೌಡ ಗೆಲುವಿನ ನಗೆ ಬೀರಿದ್ದಾರೆ.
ನ.23ರಂದು ಮತದಾನ ನಡೆದಿತ್ತು. ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು.
ಕೈ-ಕಮಲ ಅಭ್ಯರ್ಥಿಗಳ ಭಾರಿ ಪೈಪೋಟಿಯ ನಡುವೆ ಎದುರಾಳಿ ಬಿಜೆಪಿಯ ಮಂಗೇಶ ಗೌಡ ಸೋತಿದ್ದಾರೆ. 688 ಮತದಾರರಿದ್ದು, 521 ಮತ ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ 286 ಮತ ಪಡೆದರೆ ಬಿಜೆಪಿ ಅಭ್ಯರ್ಥಿ 236 ಮತ ಪಡೆದರು. 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ (10), ಬಿಜೆಪಿ (9) ಮತ್ತು ಪಕ್ಷೇತರ (4) ಸ್ಥಾನ ಹೊಂದಿದಂತಾಗಿದೆ.