ಸಂಭ್ರಮದ ಕೆರೆಂಬ್ಲಿ ಆಚರಣೆ, ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿಯ ವಿಶೇಷ

IMG-20230822-WA0013-1.jpg
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಮಾರನೇ ದಿನ ಕೆರೆಂಬ್ಲಿ ವಿಶೇಷ ಆಚರಣೆ ಮಾಡುವ ಮೂಲಕ ರೈತರು ಭೂತಾಯಿಯ ಸ್ಮರಣೆ ಮಾಡುತ್ತಾರೆ.

ಅಂತೆಯೇ, ಈ ವರ್ಷ ಮಳೆರಾಯನ ಅವಕೃಪೆಯ ಮಧ್ಯೆಯೂ ಕೆರೆಂಬ್ಲಿ ಸಂಭ್ರಮ ಜಿಲ್ಲೆಯಲ್ಲಿ ಕಂಡು ಬಂತು.

ಮಣ್ಣೆತ್ತಿನ ಅಮಾವಾಸ್ಯೆಯಿಂದ ಹಿಡಿದು ಆಷಾಡದಲ್ಲಿ ಪ್ರತಿ ಮಂಗಳವಾರ ಬಸವಣ್ಣನ ಮೂರ್ತಿ ಮಾಡಿ ಪೂಜಿಸಿದ ಕೃಷಿಕರು, ಪಂಚಮಿ ಸಂದರ್ಭದಲ್ಲಿ ಅವುಗಳಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿದರು.

ಎರಡು ದಿನ ಮಣ್ಣಿನ ನಾಗಪ್ಪನ ಮೂರ್ತಿಗೆ ಮನೆಯಲ್ಲಿ ಹಾಲೆರೆದ ನಂತರ ಬಸವಣ್ಣನ ಮೂರ್ತಿಗಳನ್ನು ಜತೆಗಿಟ್ಟು ಪೂಜೆ ಮಾಡಿ ತರಹೇವಾರಿ ಅಡುಗೆ ಮಾಡಿ ನೈವೇದ್ಯ ಮಾಡಿದರು.

ಕರಿಗಡಬು, ಭಜಿ, ಸಂಡಿಗೆ, ಬದನೆಕಾಯಿ ಪಲ್ಯ, ಅನ್ನ ಮುಂತಾದವುಗಳನ್ನು ಎಡೆ ಮಾಡಿ ನಂತರ ಅದನ್ನು ಬಸವಣ್ಣನ‌ ಮೂರ್ತಿ ಸಮೇತ ತಮ್ಮ ಜಮೀನುಗಳಲ್ಲಿ ಪ್ರತಿಷ್ಠಾಪಿಸಿದರು.

ಇದನ್ನು ಬೆಚ್ಚಿಡುವ ಪದ್ಧತಿ ಎನ್ನುತ್ತಾರೆ. ಹೀಗೆ ಬೆಚ್ಚಿಟ್ಟ ನಂತರ ನೈವೇದ್ಯವನ್ನು ಹೊಲದ ತುಂಬಾ ಚರಗ ಚೆಲ್ಲಿದರು. ಭೂತಾಯಿಗೆ ನಮಸ್ಕರಿಸಿ ಉತ್ತಮ ಫಸಲಿಗಾಗಿ ಪ್ರಾರ್ಥಿಸಿದರು.

ನಾಗಪ್ಪನ‌ ಮೂರ್ತಿಯನ್ನು ಹಿತ್ತಲಲ್ಲಿನ ಕುಂಬಳ ಬಳ್ಳಿಯಲ್ಲಿ ಇಟ್ಟು ನಮಸ್ಕರಿಸಿದರು. ಹೀಗೆ ರೈತ ಸಮುದಾಯ ಪಂಚಮಿ ಹಬ್ಬದ ಸಡಗರದಲ್ಲಿ ಮುಳುಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net