

ನರಗುಂದ: ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಫಜಲ್ ಅಲಿ ಆಯೋಗಕ್ಕೆ ಹಾಗೂ ಮಹಾಜನ್ ಆಯೋಗಕ್ಕೆ ನೇರ ವರದಿಯನ್ನು ನೀಡಿ ಬೆಳಗಾವಿ ನಮ್ಮದೆ ಎಂದು ಪ್ರತಿಪಾದಿಸಿದ ನಾಗನೂರು ಶ್ರೀಗಳ ಕನ್ನಡ ಪ್ರೇಮ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹಾಂತೇಶ ಹಿರೇಮಠ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-41 ಕಾರ್ಯಕ್ರಮ ಹಾಗೂ ಬಾಲ್ಕಿ ಚನ್ನಬಸವ ಪಟ್ಟದ್ದೇವರ ಹಾಗೂ ನಾಗನೂರು ಶಿವಬಸವ ಶ್ರೀಗಳ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.
ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸದಲ್ಲಿ ಮಠಾಧೀಶರೆಂಬ ಯಾವುದೆ ಹಮ್ಮು ಬಿಮ್ಮುಗಳಿಲ್ಲದೆ ಜನಸಾಮಾನ್ಯರಾಗಿ ಕನ್ನಡವನ್ನು ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ ಪೂಜ್ಯದ್ವಯರು. ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರ್ನ ಬಾಲ್ಕಿ ಮಠಗಳ ಕೊಡುಗೆ ಅಪಾರವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿ, ನಾಡಿನ ಇತಿಹಾಸದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಠಗಳಲ್ಲಿ ಬಾಲ್ಕಿ ಹಾಗೂ ನಾಗನೂರು ಮಠಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ ಎಂದರು.
ತೇಜಸ್ವಿನಿ ಸಿಂಧೂರ ಅವರು ಶ್ರೀಮಠದ ವಿದ್ಯಾರ್ಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದರು. ಗುರುಪಾದಪ್ಪ ಹಸಬಿ, ರೇಖಾ ಹಸಬಿ, ಸಹನಾ ತಟ್ಟಿ, ಮಲ್ಲಪ್ಪ ಶೆಟ್ಟರ್, ಶಿವಣ್ಣ ಮೊರಬದ, ಬಸವರಾಜ ಐನಾಪೂರ, ಗ್ರಾಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ ಉಪಸ್ಥಿತರಿದ್ದರು.