

ಕೊಳ್ಳೇಗಾಲ: ಸಾವಯವ ಕೃಷಿ ಮಾಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲೊಬ್ಬರು ವಿಶೇಷವಾಗಿ ಸಾವಯವ ಕೃಷಿಯಲ್ಲೇ ಕಬ್ಬು ಬೆಳೆದು, ಆರ್ಗ್ಯಾನಿಕ್ ಬೆಲ್ಲ ತಯಾರಿಕೆ ಮಾಡುತ್ತಿದ್ದಾರೆ…!
ತಾಲೂಕಿನ ಮುಳ್ಳೂರು ಗ್ರಾಮದ ಸಿದ್ದಪ್ಪ ಮತ್ತು ಮಲ್ಲಮ್ಮ ದಂಪತಿ ಪುತ್ರ ನಾಗಾನಂದ ಸಾವಯವ ಕೃಷಿ ಜತೆಗೆ ಆಲೆಮನೆ ನಡೆಸುತ್ತ ಜನರಿಗೆ ಆರೋಗ್ಯ ಒದಗಿಸುವ ರಾಸಾಯನಿಕಮುಕ್ತ ಬೆಲ್ಲವನ್ನು ಮಾರುಕಟ್ಟೆ ಮೂಲಕ ನೀಡುತ್ತಿದ್ದಾರೆ. ಕಬ್ಬು ಬೆಳೆದು, ಸ್ವಂತಿಕೆಯ ಅಕ್ಷಯ ಆರ್ಗ್ಯಾನಿಕ್ ಬ್ರಾೃಂಡ್‌ನಲ್ಲಿ ರಾಸಾಯನಿಕಮುಕ್ತ ಬೆಲ್ಲ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಮಾದರಿ ರೈತರಾಗಿದ್ದಾರೆ.
ಮೈಸೂರಿನಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ಇವರು, ಕಾರಣಾಂತರಗಳಿಂದ ಓದನ್ನು ಮೊಟಕುಗೊಳಿಸಿ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2004ರಿಂದ ಸಾವಯವ ಕೃಷಿಯತ್ತ ಸಂಪೂರ್ಣ ಮುಖ ಮಾಡಿದ ಇವರು, ಕಳೆ ಔಷಧ, ರಾಸಾಯನಿಕ ಗೊಬ್ಬರಗಳ ಬಳಕೆಗೆ ವಿದಾಯ ಹೇಳಿ, ನೈಸರ್ಗಿಕ ಪದ್ಧತಿಯಲ್ಲಿಯೇ ಕೃಷಿ ಕಾಯಕ ಮುಂದುವರಿಸಿದರು. ಆರಂಭದಲ್ಲಿ ಕಷ್ಟವಾದರೂ ಕಾಲ ಕ್ರಮೇಣ ಇಡೀ ಭೂಮಿಯನ್ನು ಸಹಜ ಕೃಷಿಗೆ ಒಗ್ಗುವಂತೆ ಕಸರತ್ತು ನಡೆಸಿದ್ದು, ವ್ಯವಸ್ಥಿತವಾದ ಕೃಷಿಯಲ್ಲಿ ತೊಡಗಿದ್ದಾರೆ
ಇರುವ ನಾಲ್ಕು ಎಕರೆ ಜಮೀನಲ್ಲಿ ಸ್ವಂತ ಆಲೆಮನೆ ನಿರ್ಮಿಸಿಕೊಂಡಿದ್ದಾರೆ. ಇದರೊಂದಿಗೆ 2.50 ಎಕರೆಯಲ್ಲಿ ಸಂಪೂರ್ಣ ಸಾವಯವ ಮಾದರಿಯಲ್ಲಿ ಕಬ್ಬು ಬೆಳೆದಿದ್ದು. ಸಾವಯವ ಶೈಲಿಯಲ್ಲಿ ಬೆಳೆದಿರುವುದರಿಂದ 4 ತಿಂಗಳ ಕಬ್ಬು ಬಹಳ ಸೊಗಸಾಗಿ ಬೆಳೆದಿದೆ. ಸಹಜ ಗೊಬ್ಬರಗಳನ್ನು ಬಳಸಿ ತಾವು ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ.
ಹಸು ಸಾಕಣೆ: ಜಮೀನಿನಲ್ಲಿ 40 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಮನೆಯಲ್ಲಿ 2 ಹಸುಗಳನ್ನು ಸಾಕುತ್ತಿದ್ದಾರೆ. ಜಮೀನಿನಲ್ಲಿ ಬೆಳೆದ ರಾಸಾಯನಿಕಮುಕ್ತ ಸೀಮೆ ಹುಲ್ಲನ್ನು ಹಸುಗಳಿಗೆ ನೀಡುತ್ತಾರೆ. ಹಸುವಿನಿಂದ ಸಿಗುವ ಸಗಣಿ, ಗೋಮೂತ್ರವನ್ನು ಸಂಗ್ರಹಿಸಿ ಜೀವಾಮೃತ ತಯಾರಿಸಿ ಬಳಸಿಕೊಳ್ಳುತ್ತಾರೆ.
ಬೇಗ ಕೆಡುವುದಿಲ್ಲ: ನಾಗಾನಂದ ಅವರ ಆಲೆಮನೆಯಲ್ಲಿ ತಯಾರು ಮಾಡಿದ ಬೆಲ್ಲಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಸಾಯನಿಕಮುಕ್ತವಾದ್ದರಿಂದ ಬೇಡಿಕೆಯೂ ಹೆಚ್ಚಿದೆ. ಒಂದು ವರ್ಷವಿಟ್ಟರೂ ಬೆಲ್ಲದ ಪದಾರ್ಥ ಕೆಡುವುದಿಲ್ಲ. ಅಷ್ಟೇ ರುಚಿಕರವಾಗಿರುತ್ತದೆ.
ಜನರಿಗೆ ಶುದ್ಧ ಬೆಲ್ಲ ಮಾರಾಟ: ಸಾವಯವ ಕೃಷಿ ಆರೋಗ್ಯಕ್ಕೆ ದಾರಿ ಎಂಬುದನ್ನು ಮನಗಂಡ ನಾಗಾನಂದ ಅವರು, ಕೃಷಿಯೊಂದಿಗೆ ಆರ್ಗ್ಯಾನಿಕ್ ಬೆಲ್ಲದ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ತಾವು ವಿಷಮುಕ್ತ ಗೊಬ್ಬರಗಳಿಂದ ಕಬ್ಬು ಬೆಳೆದು ಆಲೆಮನೆಯಲ್ಲಿ ಬೆಲ್ಲದ ಅಚ್ಚು, ಬೆಲ್ಲದ ಪೌಡರ್ , ಬೆಲ್ಲದ ಹರಳನ್ನು ತಯಾರಿಸುತ್ತಾರೆ. 1 ಕೆ.ಜಿ ಹರಳಿಗೆ 150 ರೂ., ಅಧರ್ ಕೆಜಿ ಬೆಲ್ಲದ ಪೌಡರ್‌ಗೆ 99 ರೂ. ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. 6 ತಿಂಗಳ ಹಿಂದೆ ಜಮೀನಿನಲ್ಲಿ ಸಾವಯವ ಮಾದರಿಯಲ್ಲಿ ಸೇಲಂ ಸಣ್ಣ ಬೆಳೆದಿದ್ದರು. ಇದಕ್ಕೆ ಜನರಿಂದ ಉತ್ತಮ ಬೇಡಿಕೆ ವ್ಯಕ್ತ್ತವಾಗಿತ್ತು. ನಾಗಾನಂದ ಅವರ ಬಳಿ ಪ್ರಾವಿಷನ್ ಸ್ಟೋರ್ ಇದ್ದು ಈ ಮೂಲಕ ಜನರಿಗೆ ಬೆಲ್ಲ, ಅಕ್ಕಿಯನ್ನು ಮಾರಾಟ ಮಾಡುತ್ತಾರೆ.
ಭೂಮಿ ಆರೋಗ್ಯಕ್ಕೆ ಆದ್ಯತೆ: ಇವರು ಭೂಮಿಯ ಆರೋಗ್ಯಕಾರಿ ಫಲವತ್ತತೆಗೆ ಚೆಂಬೆ ಗೊಬ್ಬರ ನೀಡುತ್ತಾರೆ. ಅಲಸಂದೆ ಸೇರಿದಂತೆ ಇನ್ನಿತರ ಕಾಳುಗಳ ಬೆಳೆಯನ್ನು ಭೂಮಿಗೆ ಮಲ್ಚಿಂಗ್ ಮಾಡುವ ವಿಧಾನ ಅನುಸರಿಸುತ್ತಾರೆ. ಸಗಣಿ ಸೇರಿದಂತೆ ಇನ್ನಿತರ ಸಾವಯವ ಗೊಬ್ಬರಗಳನ್ನು ನೀಡುತ್ತಾರೆ. ಇನ್ನು, ಜಮೀನಿನ ಸುತ್ತ ಮರಗಳಿದ್ದು ಇಲ್ಲಿಗೆ ಬರುವ ಹಕ್ಕಿ-ಪಕ್ಷಿಗಳ ಹಿಕ್ಕೆಗಳಿಂದ ಸಿಗುವ ಗಂಧಕಾಂಶ ಫಲವತ್ತೆಗೆ ಸಹಕಾರಿಯಾಗಲಿದೆ. ಜಮೀನಿನಲ್ಲಿ ಸಿಗುವ ಯಾವುದೇ ತ್ಯಾಜ್ಯವನ್ನು ಭೂಮಿಗೆ ಹಾಕಿ ಕೊಳೆಸುತ್ತಾರೆ.
ಸಾವಯವ ಕೃಷಿ ಪುರಾತನವಾದದ್ದು. ನಾವು ಇರುವುದನ್ನು ಕಳೆದುಕೊಂಡು ಮತ್ತೆ ಗಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೇ. ವಿಷ ರಹಿತ ಆಹಾರ ನೀಡುವುದು ರೈತರ ಜವಾಬ್ದಾರಿ. ಇದನ್ನು ಅರ್ಥ ಮಾಡಿಕೊಂಡು ಸಮಾಜಕ್ಕೆ ಆರೋಗ್ಯ ನೀಡಬೇಕೆಂಬ ಉದ್ದೇಶದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಹಲವು ವರ್ಷಗಳಿಂದ ನಾವು ಆಲೆಮನೆ ಮೂಲಕ ಸಾವಯವ ಬೆಲ್ಲ ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದೇವೆ. ಸಾವಯವದಿಂದ ಭೂಮಿ ಆರೋಗ್ಯ ಉಳಿಸುತ್ತಿರುವ ತೃಪ್ತಿ ನನಗಿದೆ.
> ನಾಗಾನಂದ ಮಾದರಿ ರೈತ, ಮುಳ್ಳೂರು ಗ್ರಾಮ