

ಶಿವಮೊಗ್ಗ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.7 ಮೀಸಲಾತಿ ಹೆಚ್ಚಿಸಬೇಕು. ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ನೀಡಿರುವ ವರದಿಯನ್ನು ಶೀಘ್ರ ಜಾರಿಗೆ ತರಬೇಕು. ನಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿಯೇ ರಾಜ್ಯಾದ್ಯಂತ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಶಿವಮೊಗ್ಗ ತಾಲೂಕು ವಾಲ್ಮೀಕಿ ನಾಯಕ ಸಮಾಜ ಏರ್ಪಡಿಸಿದ್ದ ವಾಲ್ಮೀಕಿ ಜಾತ್ರೆ-3 ಜನಜಾಗೃತಿ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಪ್ರತಿ ವರ್ಷ 28 ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಆದರೆ ಈ ಹಣ ಪರಿಶಿಷ್ಟರನ್ನು ತಲುಪದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಚ್ಛಾಶಕ್ತಿ ಹಾಗೂ ಸಂಘಟನೆ ಕೊರತೆಯಿಂದ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ವಾಲ್ಮೀಕಿ ಮಹಾ ತಪಸ್ವಿಯಾಗಿದ್ದರು. ಬೇಡರ ಕಣ್ಣಪ್ಪ, ಏಕಲವ್ಯ ನಮ್ಮ ಸಮಾಜದ ಪುರಾಣ ಪ್ರಸಿದ್ಧರು. ಪಾಳೇಗಾರರಾಗಿ ಮೆರೆದ ನಾವು ಈ ನಾಡಿನ ರಕ್ಷಣೆಗಾಗಿ ನಿಂತವರು. ಇಷ್ಟೊಂದು ಇತಿಹಾಸವುಳ್ಳ ಸಮಾಜದ ನಾವು ಈಗ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಬಲಾಢ್ಯ ಜಾತಿಗಳ ನಡುವೆ ವಾಲ್ಮೀಕಿ ಸಮುದಾಯದಂತಹ ಹಿಂದುಳಿದ ಜಾತಿಗಳು ನಲುಗಿಹೋಗುತ್ತಿವೆ. ದೇಶದಲ್ಲಿ 10 ಕೋಟಿ ವಾಲ್ಮೀಕಿ ಜನಾಂಗದವರಿದ್ದಾರೆ. ರಾಜ್ಯದಲ್ಲಿ ನಮ್ಮ ಸಂಖ್ಯೆ 60 ಲಕ್ಷ. ಈ ಸಮುದಾಯದ ಮೂಲ ಕುಲಕಸುಬು ಬೇಟೆ. ಈಗ ಅದಕ್ಕೆ ಅವಕಾಶವಿಲ್ಲ. ಹೀಗಾಗಿ ನಮ್ಮ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಮಟ್ಟದ ವಾಲ್ಮೀಕಿ ಸೇವಾ ಸಮಿತಿ ರಚಿಸಲಾಯಿತು. ವಿವಿಧ ನಿಗಮ, ಮಂಡಳಿಗಳ ಸದಸ್ಯರನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಾಲ್ಮೀಕಿ ಸಮಾಜದ ಮುಖಂಡ ಬಿ.ಎಸ್.ನಾಗರಾಜ್, ಎಚ್.ಆರ್.ಹನುಮಂತಪ್ಪ, ಲಕ್ಷ್ಮಣ್, ಸುರೇಶ್, ಲೋಕೇಶ್, ವನಜಾಕ್ಷಮ್ಮ, ಶಿವಪ್ಪ ಇತರರಿದ್ದರು.