

ವಿಜಯವಾಣಿ ಸುದ್ದಿಜಾಲ ಕೋಟ
ಕಾವಡಿ ಸಮೀಪ ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕ ತೆರೆಯಲು ಪ್ರಯತ್ನಿಸಲಾಗುತ್ತಿದ್ದು, ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ಕಾವಡಿ ದೊಡ್ಡ ಹೊಳೆ ಮುಚ್ಚಿ ಮರಳು ಸಂಗ್ರಹ ಘಟಕ ಸ್ಥಾಪಿಸಲಾಗುತ್ತಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನಿರಂತರವಾಗಿ ನೆರೆ ಸಮಸ್ಯೆ ಇದೆ. ಘಟಕ ಆರಂಭವಾದರೆ ಸಮಸ್ಯೆ ಹೆಚ್ಚಲಿದೆ ಹಾಗೂ ಅಕ್ರಮ ಮರಳುಗಾರಿಕೆಗೆ ಎಡೆಯಾಗಲಿದೆ. ಆದ್ದರಿಂದ ಈ ಕಾರ್ಯಕ್ಕೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಪಟ್ಟುಹಿಡಿದರು.
ಗಣಿ ಅಧಿಕಾರಿ ಅಶ್ವಿನಿ ಪ್ರತಿಕ್ರಿಯಿಸಿ, ಗ್ರಾಮಸ್ಥರ ಆಕ್ಷೇಪವಿರುವ ಬಗ್ಗೆ ಹಾಗೂ ಮುಂದೆ ಯಾವುದೇ ಮರಳುಗಾರಿಕೆ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬ ಗ್ರಾಮಸ್ಥರ ಆಗ್ರಹ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಗ್ರಾಮಸ್ಥರಿಗೆ ಮುಂದೆ ಸಮಸ್ಯೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋಟ ಠಾಣೆ ಉಪನಿರೀಕ್ಷಕ ರಾಘವೇಂದ್ರ ಎಚ್ಚರಿಕೆ ನೀಡಿದರು. ವಡ್ಡರ್ಸೆ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಕಾಂಚನ್, ಕೋಟ ಆರ್.ಐ ಮಂಜು ಬಿಲ್ಲವ, ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ, ಪಂಚಾಯಿತಿ ಸದಸ್ಯ ಪ್ರವೀಣ, ಚಂದ್ರ ಮರಕಾಲ, ಚಂದ್ರ ಮೊದಲಾದವರಿದ್ದರು.
ಕಾಮಗಾರಿ ನಡೆಯುತ್ತಿರುವ ಸ್ಥಳ ಖಾಸಗಿ ಭೂಮಿ ಎಂದು ಮರಳುಗಾರಿಕೆ ನಡೆಸುವವರು ಹೇಳುತ್ತಿದ್ದಾರೆ. ಖಾಸಗಿ ಸ್ಥಳವಾದರೂ ಯಾವುದೇ ಪರವಾನಗಿ ನೀಡಿಲ್ಲ. ಮುಂದೆ ಖಾಸಗಿ ಸ್ಥಳ ಗುರುತಿಸಿ, ಕಾನೂನು ಪ್ರಕಾರ ಅನುಮತಿ ಪಡೆದು ನಡೆಸಬಹುದು. ಅಲ್ಲಿಯ ತನಕ ಯಾವುದೇ ಕಾಮಗಾರಿ ನಡೆಸುವಂತಿಲ್ಲ. -ಶ್ರೀಕಾಂತ್ ಹೆಗ್ಡೆ, ಬ್ರಹ್ಮಾವರ ತಹಸೀಲ್ದಾರ್ https://www.vijayavani.net/sringeri-sri-visit-to-gundmi-ashram https://www.vijayavani.net/scouts-guides-make-the-youth-strong