

ನಾಗಮಂಗಲ: ನ್ಯಾಯಬೆಲೆ ಅಂಗಡಿಗಳ ಅಮಾನತು ಆದೇಶ ತೆರವುಗೊಳಿಸಿರುವ ಜಿಲ್ಲಾಡಳಿತದ ವಿರುದ್ಧ ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ಸ್ಥಳೀಯರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ಪಡಿತರ ತೂಕದಲ್ಲಿ ಮೋಸ ಮತ್ತು ಹಣ ವಸೂಲು ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರ ದೂರು ಆಧರಿಸಿ ಅಮಾನತ್ತಿನಲ್ಲಿಟ್ಟಿದ್ದ ತಾಲೂಕಿನ ಬಿಂಡಿಗನವಿಲೆ ವಿ.ಎಸ್.ಎಸ್.ಎನ್.ನ್ಯಾಯಬೆಲೆ ಅಂಗಡಿ, ಬೋರೇಗೌಡ ಮಾಲೀಕತ್ವದ ಮಾಚನಾಯಕನಹಳ್ಳಿ ಹಾಗೂ ಯುವಕರ ಸಂಘದ ಮಾಲೀಕತ್ವದ ಹೊನ್ನಾವರ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಕೇವಲ ಮೂರೇ ವಾರದಲ್ಲಿ ಅಮಾನತು ತೆರವುಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸಾರ್ವಜನಿಕ ಹಿತಾಸಕ್ತಿಗೆ ಮಾಡಿದ ದ್ರೋಹ. ತೂಕದಲ್ಲಿ ಮೋಸ ಮತ್ತು ಹಣ ವಸೂಲು ಮಾಡುತ್ತಿರುವ ಬಗ್ಗೆ ವಿಡಿಯೋ ಚಿತ್ರೀಕರಣದ ಸಿಡಿಯಂಥ ಮಹತ್ತರ ದಾಖಲಾತಿಯೊಂದಿಗೆ ಆಹಾರ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್-19 ನೆಪದಲ್ಲಿ ಇವರಿಂದಲೇ ಪಡಿತರ ಹಂಚಿಕೆ ಮಾಡುವ ಬದಲಿಗೆ ಆಹಾರ ಇಲಾಖೆಯಿಂದಲೇ ತಾತ್ಕಾಲಿಕ ಸಿಬ್ಬಂದಿ ನೇಮಿಸುವ ಮೂಲಕ ಪಡಿತರ ವಿತರಿಸಬಹುದಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನಾವರ ಶಂಕರಣ್ಣ, ರುದ್ರೇಶ್ ಹಾಗೂ ದುರ್ಗೇಶ್ ಸೇರಿ ಈರಕನಘಟ್ಟ, ಹೊನ್ನಾವರ, ಮಾಚನಾಯಕನಹಳ್ಳಿ ಗ್ರಾಮದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನ್ಯಾಯಬೆಲೆ ಅಂಗಡಿ ಎದುರು ಆಕ್ರೋಶ ವ್ಯಕ್ತಪಡಿಸಿದರು.