ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಮತದಾನ

IMG_2573
Published on

ನಾಗಮಂಗಲ: ತಾಲೂಕಿನ ಪಿಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಶನಿವಾರ ಪಟ್ಟಣದ ಕಿರಿಯ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,404 ಮತಗಳು ಚಲಾವಣೆಗೊಂಡವು. ಬೆಳಗಿನಿಂದ ಸಂಜೆವರೆಗೂ ನಡೆದ ಮತದಾನದಲ್ಲಿ ಉಮೇದುವಾರರು ಮತದಾರರ ಮನ ಒಲಿಸುವಲ್ಲಿ ಸಕ್ರಿಯರಾಗಿದ್ದರು.

ಪಿಎಲ್ ಡಿ ಬ್ಯಾಂಕ್ ನ ಒಟ್ಟು 14 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಉಳಿದ 12 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. 34 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ - ಜೆಡಿಎಸ್ ಬೆಂಬಲಿತ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ಕೇಂದ್ರದ ಬಳಿ ಜಮಾವಣೆಗೊಂಡು ಮತಯಾಚಿಸಿದರು. ಸಾಲಗಾರರ ಕ್ಷೇತ್ರಕ್ಕೆ 11 ಮತಗಟ್ಟೆಗಳಲ್ಲಿ ಮತದಾನ ನಡೆದರೆ, ಸಾಲಗಾರರಲ್ಲದ ಒಂದು ಕ್ಷೇತ್ರಕ್ಕೆ 6 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

ಮಾತಿನ ಚಕಮಕಿ: ವೃದ್ಧರೊಬ್ಬರ ಮತದಾನಕ್ಕೆ ಸಹಾಯಕರನ್ನು ಕರೆದುಕೊಂಡು ಹೋಗುವ ವಿಚಾರವಾಗಿ ಕೆಲಕಾಲ ಎರಡು ಪಕ್ಷದ ಮುಖಂಡರ ನಡುವೆ ಮಾತಿನ ಚಕಮಕಿ ನಡೆದವು. ಪೊಲೀಸರು ಎರಡೂ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್ಸೈಗಳಾದ ರವಿಕುಮಾರ್ ಮತ್ತು ರಾಜೇಂದ್ರ ಬಂದೋಬಸ್ತ್ ಒದಗಿಸಿದರು. ಚುನಾವಣಾಧಿಕಾರಿಯಾಗಿ ತಾ.ಪಂ.ಇಒ ಸತೀಶ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net