

ನಾಗಮಂಗಲ: ನಮ್ಮ ತಂದೆಗೆ ಆಪರೇಷನ್ ಆಗಿರೋದು ನಿಜವಾಗಿದ್ದು, ಅದನ್ನು ಬೇರೆಯವರಿಗೆ ಪ್ರೂ ಮಾಡುವ ಅಗತ್ಯವಿಲ್ಲ. ಮೂರನೇ ಬಾರಿಗೆ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆಯಾಗಿದ್ದು, ಅದರ ಅನುಕಂಪದಲ್ಲಿ ಮತ ಕೇಳುವ ಪ್ರಮೇಯ ನಮಗಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಾಗಮಂಗಲ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದರ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಹಿರಿತನಕ್ಕೆ ಈ ಮಾತು ಶೋಭೆ ತರಲ್ಲ. 6 ವರ್ಷದಲ್ಲಿ ಮೂರನೇ ಬಾರಿ ಹೃದಯದ ಆಪರೇಷನ್ ಆಗಿರೋದು ನಮಗೆ ನೋವು ಆಗಿದೆ ಎಂದು ಅವರು, ಈ ಸಂದರ್ಭ ಮಾಧ್ಯಮಗಳಿಗೆ ಉತ್ತರಿಸುವಾಗ ಭಾವುಕರಾದರು.
ನಮ್ಮ ಕುಟುಂಬ ಮೊಸಳೆ ಕಣ್ಣೀರು ಹಾಕಿಲ್ಲ. ಕುಮಾರಣ್ಣ ಭಾವನಾತ್ಮಕ ಜೀವಿ. ಜನರಿಗೆ ಕಷ್ಟಗಳಾದಾಗ ಕುಮಾರಣ್ಣನಿಗೆ ಕಣ್ಣೀರು ಬರುತ್ತೆ. ಅವರ ಸ್ಪರ್ಧೆಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಹೀಗೆ ಮಾತನಾಡುತ್ತಾರೆ. ಈ ಎಲ್ಲವನ್ನು ಜಿಲ್ಲೆ ಹಾಗೂ ರಾಜ್ಯದ ಜನರು ನೋಡುತ್ತಿದ್ದಾರೆ. ಕುಮಾರಣ್ಣ ಎಲ್ಲೇ ಸ್ಪರ್ಧೆ ಮಾಡಿದರೂ ಜನರು ಶಕ್ತಿ ಕೊಟ್ಟಿದ್ದಾರೆ. ಜನರು ಕುಮಾರಣ್ಣನ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತಾರೆ. ಬೇರೆ ಯಾರು ಅವರ ಸ್ಪರ್ಧೆ ನಿರ್ಣಯ ಮಾಡಲ್ಲ. ಜನರ ಆಶಯದಂತೆ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ. ಮಂಡ್ಯ ಸಂಸದರನ್ನು ನಾವು ಬೆಂಬಲ ಕೇಳ್ತೀವಿ, ಅವರನ್ನು ಹೋಗಿ ಮಾತಾಡಿಸುತ್ತೇವೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಆಪರೇಷನ್ ಬಗ್ಗೆ ಮಾತಾಡೋದಕ್ಕೆ ನಾಚಿಕೆ ಆಗಬೇಕು. ಇಂತಹ ಹೇಳಿಕೆ ರಮೇಶ ಬಂಡಿಸಿದ್ದೇಗೌಡ ಅವರಿಗೆ ಗೌರವ ತರುವುದಿಲ್ಲ. ಕುಮಾರಣ್ಣನ ಬಗ್ಗೆ ನಾನು ಮಾತನಾಡಿದ್ದು ತಪ್ಪು ಎಂದು ಅವರ ತಾಯಿ ಮುಂದೆ ಕ್ಷಮೆ ಕೋರಲಿ ಎಂದು ತಾಕೀತು ಮಾಡಿದರು.
ದೇವೇಗೌಡ ಅವರು ಕೊಟ್ಟ ರಾಜಕೀಯ ಭಿಕ್ಷೆಯಿಂದ ನಾನು, ಚಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ ನಾಯಕರಾಗಿರೋದು. ನಾನು ದೇವರಿಗೆ ಹೋಗುವುದು ಹೊಸದೇನಲ್ಲ. ಅಮೆರಿಕದ ನನ್ನ ಸ್ನೇಹಿತ ದೇವಸ್ಥಾನಕ್ಕೆ ಹೋಗಬೇಕು ಎಂದಿದ್ದರು. ಚಲುವರಾಯಸ್ವಾಮಿಗೂ ಅವರು ಸ್ನೇಹಿತರು. ಆದ್ದರಿಂದ ಅಯೋಧ್ಯೆಗೆ ಹೋಗಿ ಬಂದಿದ್ದೇವೆ. ಟಿಕೆಟ್‌ಗಾಗಿ ನಾನು ದೇವಸ್ಥಾನಕ್ಕೆ ಹೋಗಿದಲ್ಲ. ಕುಮಾರಸ್ವಾಮಿ, ದೇವೇಗೌಡ, ನಿಖಿಲ್ ಅವರು ನನ್ನನ್ನು ಅಭ್ಯರ್ಥಿ ಮಾಡಲು ಪ್ರಯತ್ನಪಟ್ಟರು. ಆದರೆ ನಾನೇ ದೇವೇಗೌಡರ ಕುಟುಂಬದವರೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದೇನೆ. ಹೀಗಿರುವಾಗ ನಮ್ಮನೆ ಸುದ್ದಿ ಇವರಿಗೆ ಯಾಕೆ? ನಾವು ಕಿಚಡಿ ಬಾತ್‌ನಾದ್ರು ಮಾಡ್ಕೊಂಡು ತಿಂತೀವಿ, ಬಿರಿಯಾನಿಯಾದ್ರು ಮಾಡ್ಕೊಂಡು ತಿಂತೀವಿ. ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ನೊಣ, ಹೆಗ್ಗಣ ಎತ್ತಾಕಿ ಊಟ ಮಾಡೋದು ಕಲಿಯಲಿ. ಇವರಿಗೆ ಯಾಕೆ ಹತಾಶೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.