ಕಿರಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ

26 NMG 01 (7)
Published on

ಮೃತನ ಪತ್ನಿಗೆ ಉದ್ಯೋಗ ಭರವಸೆ

  • ನಾಗಮಂಗಲ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುತ್ತಾರೆಂಬ ಭಯದಿಂದ ಊರು ಬಿಟ್ಟು ಬೆಂಗಳೂರಿಗೆ ಹೋದಾಗ ಬ್ರೈನ್‌ಸ್ಟ್ರೋಕ್‌ನಿಂದ ಮೃತಪಟ್ಟಿದ್ದ ಭದ್ರಿಕೊಪ್ಪಲಿನ ಕಿರಣ್ ಮನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
    ಕಿರಣ್ ಪತ್ನಿ ಸೌಮ್ಯಾ ಮತ್ತು ತಾಯಿ ಶಶಿ ಅವರಿಗೆ ಸಮಾಧಾನ ಹೇಳಿದ ಸಚಿವರು, ಕೆಲವೊಮ್ಮೆ ನಿರಪರಾಧಿಗಳಿಗೂ ತೊಂದರೆ ಆಗುತ್ತದೆ. ಶಾಂತಿ ತಂದುಕೊಂಡು ಬದುಕು ನಡೆಸಬೇಕು ಎಂದರು. ಘಟನೆಯಿಂದ ನೊಂದಿರುವ ಸೌಮ್ಯಾ ಅವರ ಜೀವನ ನಿರ್ವಹಣೆಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ ಸಚಿವರು, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
    ದುರ್ಘಟನೆಗೆ ಕುಮ್ಮಕ್ಕು ಕಾರಣವಾಗಿದೆ: ಭದ್ರಿಕೊಪ್ಪಲು ಗ್ರಾಮದ ಮಹಿಳೆಯರು ಮತ್ತು ಹಿರಿಯರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಘಟನೆಯ ಹಿಂದೆ ಗ್ರಾಮದ ಯುವಕರು ಇಲ್ಲ. ಬೇರೆಯವರ ಕುಮ್ಮಕ್ಕು ಕಾರಣವಾಗಿದೆ ಎಂದರು. ಗಲಭೆಗೆ ಯಾರು ಕಾರಣರು ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸದ್ಯ ಜೈಲಿನಲ್ಲಿ ಇರುವವರು ಮತ್ತು ಭಯದಿಂದ ಊರು ಬಿಟ್ಟಿರುವವರು ಶಾಂತವಾಗಿರಬೇಕು. ಜಾಮೀನು ಕೊಡಿಸಲು ನಮ್ಮ ಕಾರ್ಯಕರ್ತರು ಗಮನಹರಿಸಿದ್ದಾರೆ. ಯಾರನ್ನೂ ಅರೆಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು. ಊರು ತೊರೆದಿರುವವರ ಪ್ರತೀ ಕುಟುಂಬಕ್ಕೆ ತಲಾ 5 ಸಾವಿರ ರೂ. ಹಣದ ನೆರವು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net