

ನಾಗಮಂಗಲ: ಪೊಲೀಸರ ಮುಂದೆಯೇ ಪೆಟ್ರೋಲ್ ಬಾಂಬ್ ಹಾಕಿ ಅಟ್ಟಹಾಸ ಮೆರೆದಿರುವ ತಹ ಮತಾಂಧರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಕಳೆದ ಬಾರಿ ಇದೇ ಮಾರ್ಗದಲ್ಲಿ ಮೆರವಣಿಗೆ ಹೋಗುವಾಗ ಗಲಾಟೆಯಾಗಿದ್ದರೂ ಪೊಲೀಸರು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಕ್ತ ಭದ್ರತೆ ನೀಡಲು ಸೂಚಿಸದ ಸಾಮಾನ್ಯ ಜ್ಞಾನವಿಲ್ಲದ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಪಟ್ಟಣದಲ್ಲಿ ಕೋಮುಗಲಭೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ಮಾತನಾಡಿದರು. ಭಯೋತ್ಪಾದಕರಿಗೆ, ಮುಸ್ಲಿಂ ರೌಡಿಗಳಿಗೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಇದು ನಮ್ಮ ಸರ್ಕಾರ ಎಂಬ ನಂಬಿಕೆ ಬಂದಂತೆ ಕಾಣುತ್ತಿದೆ. ಬೈಕ್‌ಗಳಿಗೆ, ಅಂಗಡಿಗಳಿಗೆ ಪೊಲೀಸರ ಮುಂದೆಯೇ ಬೆಂಕಿ ಹಾಕಲಾಗಿದೆ. ಅವರು ಅಷ್ಟೆಲ್ಲ ಮಾಡುತ್ತಿದ್ದರೆ ಪೊಲೀಸರು ಕತ್ತೆ ಕಾಯುತ್ತಿದ್ದರಾ? ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಆರೋಪಿಸಿದರು.
ಗಣೇಶ ಉತ್ಸವ ನಡೆಯುತ್ತಿರುವ ರಾಜ್ಯದ ವಿವಿಧ ಕಡೆಗಳಲ್ಲಿ ಗಲಾಟೆಗಳಾಗುತ್ತಿವೆ. ಸರ್ಕಾರ ನಮಗೆ ಬೆಂಬಲವಾಗಿದೆ ಎಂಬುದು ಅವರಿಗೆ ಧೈರ್ಯವಾಗಿದೆ. ಈ ತರಹದ ಘಟನೆಗಳು ರಾಜ್ಯದಲ್ಲಿ ಪದೇ ಪದೆ ಆಗುತ್ತಿವೆ. ಶಿವಮೊಗ್ಗದಲ್ಲಿ ಮಚ್ಚು, ಲಾಂಗ್ ತೆಗೆದುಕೊಂಡು ಹೊಡೆದಾಡಿದಾಗಲೂ ಯಾವುದೇ ಕ್ರಮವಾಗಿಲ್ಲ. ಕೋಲಾರದಲ್ಲಿ 250 ಕೆ.ಜಿ. ತಲ್ವಾರ್ ಅಳವಡಿಸಿದ್ದಾಗಲೂ ಅವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಕಾಂಗ್ರೆಸ್‌ನ ಎಂಎಲ್ಸಿಯೊಬ್ಬರು ಬಾಂಗ್ಲಾದೇಶದ ಮಾದರಿಯಲ್ಲಿ ಇಲ್ಲಿಯೂ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದರು ಈಗ ಅದೇ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.
ಕೆರಗೋಡಿನಲ್ಲಿ ಹನುಮ ಧ್ವಜ ಕೆಳಗಿಳಿಸುವಾಗ ಸಂಪೂರ್ಣ ಕಾಂಗ್ರೆಸ್ಸಿಗರಿದ್ದರು. ಹನುಮನನ್ನು ವಿಲನ್ ಮಾಡಿದ್ದಾಯ್ತು, ಈಗ ಗಣೇಶನ ಕಂಡರೂ ಆಗುತ್ತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಹಣೆಯಲ್ಲಿ ಕುಂಕುಮ ಕಂಡರೆ, ಕೇಸರಿ ಕಂಡರೆ ಆಗುವುದಿಲ್ಲ. ಈಗ ಏನೋ ಕೇಸ್ ಬಿದ್ದಿದೆ ಅಂತ ನಾಮವಿಡುತ್ತಿದ್ದಾರೆ. ಗಣೇಶನ ಮೇಲೆ ಕಾಂಗ್ರೆಸ್ಸಿನವರಿಗೆ ವಕ್ರದೃಷ್ಟಿ ಬಿದ್ದಿದೆ. ಈ ಸರ್ಕಾರ ಸರ್ವನಾಶವಾಗೋದು ಗ್ಯಾರಂಟಿ. ಇದೇ ರೀತಿ ರಾಜ್ಯದಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದರೆ, ಮುಸ್ಲಿಂ ಓಲೈಕೆ ರಾಜಕಾರಣ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಠೇವಣಿ ಕೂಡ ಬರಲ್ಲ ಎಂದು ಜರಿದರು.
ಕೂಡಲೇ ಹಾನಿಗೊಳಗಾಗಿರುವವರಿಗೆ ಪರಿಹಾರ ನೀಡಬೇಕು. ಅನ್ಯಾಯಕ್ಕೊಳಗಾಗಿರುವ ಹಿಂದುಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ. ಪೆಟ್ರೋಲ್ ಬಾಂಬ್ ಹಾಕಿರೋದು ಗೃಹ ಸಚಿವರಿಗೆ ಸಣ್ಣ ಘಟನೆಯಾಗಿದೆ. ಅವರಿಗೆ ಮಿಸೈಲ್, ರಾಕೆಟ್ ಬಿದ್ದರಷ್ಟೆ ದೊಡ್ಡ ಘಟನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2 ದಿನಗಳ ಗಡುವು ನೀಡಿದ ಅಶೋಕ್
ಗಣಪತಿ ಪ್ರತಿಷ್ಠಾಪನಾ ಸಮಿತಿಯವರ ವಿರುದ್ಧ ಹಾಕಲಾಗಿರುವ ಪ್ರಕರಣಗಳನ್ನು 2 ದಿನಗಳೊಳಗೆ ರದ್ದುಪಡಿಸಿ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಜರುಗಿಸದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಡಿಸಿ ಮತ್ತು ಎಸ್ಪಿ ಅವರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಶಾಸಕರಾದ ಸುನೀಲ್ ಕುಮಾರ್, ಮುನಿಸ್ವಾಮಿ, ಅಶ್ವತ್ಥ್‌ನಾರಾಯಣ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಮತ್ತಿತರಿದ್ದರು.