

ನಾಗಮಂಗಲ: ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಿರುತೆರೆಯ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಸೀಜನ್ 4ರ ವಿಜೇತೆ ಮೆಬೀನಾ ಮಿಚೈಲ್ (22) ಸಾವಿಗೀಡಾಗಿದ್ದಾರೆ.
ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದೇವಿಹಳ್ಳಿ ಸಮೀಪ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ. ಮಡಿಕೇರಿ ಮೂಲದ ಮೆಬೀನಾ ತನ್ನಿಬ್ಬರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಸೋಮವಾರಪೇಟೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿರಿಸಾವೆ ಟೋಲ್ ಕಡೆಯಿಂದ ಸ್ವಗ್ರಾಮಕ್ಕೆ ಹಿಂದಿರುಗುವಾಗ ಹೆದ್ದಾರಿಯಿಂದ ತಿರುವು ತೆಗೆದುಕೊಂಡ ಟ್ರ್ಯಾಕ್ಟರ್‌ಗೆ ಅತಿ ವೇಗವಾಗಿ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ, ಮೆಬೀನಾ, ವಿನೋದ್ ಮತ್ತು ಕಾರು ಚಾಲನೆ ಮಾಡುತ್ತಿದ್ದ ರಾಜು ಎಂಬುವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೆಬೀನಾ ಮೃತಪಟ್ಟಿದ್ದಾರೆ. ಉಳಿದಿಬ್ಬರು ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥೀತಿಯೂ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಟ್ರ್ಯಾಕ್ಟರ್‌ಗೂ ಹಾನಿಯಾಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.