ನಾಗಮಂಗಲ ಗಲಭೆ ಸಮಗ್ರ ತನಿಖೆಯಾಗಬೇಕು

16 NMG 02 (2)
Published on

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆಗ್ರಹ> ಹಾನಿಗೊಳಗಾದ ಅಂಗಡಿಗಳಿಗೆ ಬಿಜೆಪಿ ನಿಯೋಗದ ಪ್ರಮುಖರ ಭೇಟಿ

  • ನಾಗಮಂಗಲ.: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದಿರುವ ಕೋಮು ಗಲಭೆಯ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಸಿದ್ದಪಡಿಸುವ ವರದಿಯನ್ನು ಬಿಜೆಪಿ ನಿಯೋಗವು ವಿರೋಧ ಪಕ್ಷದ ನಾಯಕರ ಕಚೇರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಇಲಾಖೆಗೆ ಹಾಗೂ ರಾಜ್ಯಪಾಲರ ಗಮನಕ್ಕೆ ತರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
    ಕೋಮುಗಲಭೆಯಿಂದ ಹಾನಿಗೊಳಗಾದ ಅಂಗಡಿಗಳಿಗೆ ಸೋಮವಾರ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೋಮು ಗಲಭೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸತ್ಯಾಸತ್ಯತೆ ಹೊರಬರಬೇಕು. ಈ ಘಟನೆ ಹಿಂದೆ ಯಾವುದೋ ಹಿನ್ನೆಲೆ ಇದೆ. ಅದರ ಆಳ-ಅಗಲ ತಿಳಿಯುವ ಕೆಲಸ ಆಗಬೇಕಿದೆ. ಕೇರಳ ಮೂಲದ ಇಬ್ಬರು ಗಲಭೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎನ್‌ಐಎ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
    ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಹಿಂದು ಧರ್ಮದ ಅಮಾಯಕ ಯುವಕರನ್ನು ಬಂಧಿಸುವ ಮೂಲಕ ಓಲೈಕೆಯ ರಾಜಕಾರಣಕ್ಕೆ ಮುಂದಾಗಿದೆ. ಈ ಪ್ರಕರಣದಿಂದ ನೊಂದವರಿಗೆ ಪರಿಹಾರ ನೀಡುವ ಕೆಲಸವಾಗಬೇಕು. ಆದರೆ ಪರಿಹಾರ ಕೊಡುವವರು ಯಾರು ಎಂಬುದರ ಮೇಲೆ ಚರ್ಚೆಯಾಗಬೇಕು. ಈ ಎಲ್ಲಾ ಉದ್ದೇಶದಿಂದ ರಚಿಸಲಾಗಿರುವ ಸತ್ಯಶೋಧನಾ ಸಮಿತಿ ಒಂದು ವಾರದ ಮಿತಿಯಲ್ಲಿ ಘಟನೆಯ ಪ್ರತಿ ಹಂತದ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಲಿದೆ. ನಮ್ಮ ಪಕ್ಷದ ನಿಯೋಗದಿಂದಲೇ ಸತ್ಯ ಹೊರಬೀಳಲಿದೆ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

  • ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ:
    ಆಡಿಯೋ ಸಂಭಾಷಣೆ ನನ್ನದಲ್ಲ ಎಂದು ಹೇಳಿಕೆ ನೀಡಿದ್ದರೂ, ಯಾವುದೇ ತನಿಖೆ ನಡೆಸದೆ, ರಜಾ ದಿನಗಳನ್ನು ನೋಡಿಕೊಂಡು ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ದೇಶದ ಪರವಾಗಿ ಕೆಲಸ ಮಾಡುವವರನ್ನು ಗುರಿಯನ್ನಾಗಿಸಿಕೊಂಡು ಪಾಂಡವಪುರದ ಆರ್.ಎಸ್.ಎಸ್. ಕಚೇರಿಯಲ್ಲಿ ಹಿಂದು ಮುಖಂಡನ ಮೇಲೆ ದಾಳಿ ಮಾಡಲಾಗಿದೆ. ಈ ಸರ್ಕಾರದ ತುಷ್ಟೀಕರಣ ಮಿತಿಮೀರಿದೆ. ಚೆನ್ನಾರೆಡ್ಡಿ ಪ್ರಕರಣ ಸೇರಿದಂತಗೆ ಅನೇಕ ಪ್ರಕರಣಗಳ ವಿಚಾರಣೆ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್ ಮೊರೆ ಹೋಗ್ತೀವಿ:
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಶಾಂತಿ ಪ್ರದೇಶವಾಗಿದ್ದ ನಾಗಮಂಗಲದಲ್ಲಿ ದುಷ್ಕೃತ್ಯ, ಗಲಭೆ, ಹಿಂಸೆ ನಡೆದಿರುವುದು ನಿಜಕ್ಕೂ ವಿಷಾದನೀಯ. ಅದರಲ್ಲೂ ಪ್ರಕರಣದಲ್ಲಿ ಕೇರಳದ ದುಷ್ಕರ್ಮಿಗಳ ನಂಟಿರುವುದು ಹಲವು ಅನುಮಾನಗಳಿಗೆ ದಾರಿಯಾಗಿದೆ ಎಂದರು. ರಾಷ್ಟ್ರೀಯ ತನಿಖಾ ಸಂಸ್ಥೆಯೂ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಿಜೆಪಿಯ ಸತ್ಯಶೋಧನಾ ಸಮಿತಿ ಮತ್ತು ಬೆಂಗಳೂರು ವಕೀಲರ ಸಂಘದ ಪ್ರಮುಖರ ತಂಡವೂ ಈ ಬಗ್ಗೆ ಸಮಗ್ರ ತನಿಖಾ ವರದಿ ಸಿದ್ಧ್ದಪಡಿಸಲಿದೆ. ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ನಾವು ಹೈ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಿವೇಕ ಸುಬ್ಬಾರೆಡ್ಡಿ ತಿಳಿಸಿದರು.

ಜಾಮೀನು ಕೊಡಿಸುವ ಕೆಲಸ :
ನಾಗಮಂಗಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ 400ಕ್ಕೂ ಹೆಚ್ಚು ಜನ ಊರು ಬಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಘಟನೆಯಲ್ಲಿ ಭಾಗಿಯಾಗದಿದ್ದರೂ ಬಂಧಿಸಿರುವ ಮತ್ತು ಬಂಧನದ ಭೀತಿಯಲ್ಲಿರುವ ಅಮಾಯಕರಿಗೆ ಉಚಿತವಾಗಿ ಜಾಮೀನು ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ನಾಗಮಂಗಲ ವಕೀಲರ ಸಂಘದ ಅಧ್ಯಕ್ಷ ಮಹದೇವ ತಿಳಿಸಿದರು.ಪ್ರಕರಣ ಇತ್ಯರ್ಥವಾಗುವವರೆಗೂ ಉಚಿತವಾಗಿ ಕೋರ್ಟಿನಲ್ಲಿ ನ್ಯಾಯ ಮಂಡನೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಕುಟುಂಬಸ್ಥರಿಗೆ ಆತ್ಮಸ್ಥೈರ್ಯ:
ಗಲಭೆಯಲ್ಲಿ ಬೆಂಕಿಗಾಹುತಿಯಾಗಿರುವ ಪ್ರತಿಯೊಂದು ಅಂಗಡಿಗಳ ಸಂಪೂರ್ಣ ಮಾಹಿತಿಯನ್ನು ಮಾಜಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ಅವರ ತಂಡ ಸಂಗ್ರಹಿಸಿತು. ಪ್ರಕರಣದ ಕೇಂದ್ರ ಸ್ಥಳ ಭದ್ರಿಕೊಪ್ಪಲು ಗ್ರಾಮಕ್ಕೂ ಭೇಟಿ ನೀಡುವ ಮೂಲಕ ಬಂಧನಕ್ಕೊಳಗಾಗಿರುವವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದು ಗಮನ ಸೆಳೆಯಿತು.
**
ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು:
ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಕೋಮು ಗಲಭೆಯ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸೋಮವಾರ ನಾಗಮಂಗಲ ಪಟ್ಟಣದ ಮಸೀದಿಗಳ ಬಳಿ ಸರ್ಪಗಾವಲು ಹಾಕಿತ್ತು. ಗಲಭೆಯ ದಿನದಿಂದಲೂ ಪಟ್ಟಣದಲ್ಲಿ ವಾಸ್ತವ್ಯ ಹೂಡಿರುವ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರವೂ ಪರಿಸ್ಥಿತಿ ಅವಲೋಕಿಸಿದರು.
ಭದ್ರತೆ ಹಾಗೂ ಇರುವ ಪರಿಸ್ಥಿತಿಯ ಬಗ್ಗೆ ರಾಜ್ಯ ಗೃಹ ಇಲಾಖೆಗೆ ಮಾಹಿತಿ ನೀಡುವ ಸಂಬಂಧ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಈದ್ ಮಿಲಾದ್ ಆಚರಣೆಗೆ ಯಾವುದೇ ತೊಂದರೆ ಆಗದಂತ ದರ್ಗಾ ಹಾಗೂ ಮಸೀದಿಗಳ ಬಳಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು.ಪಟ್ಟಣದಲ್ಲಿ ಇಬ್ಬರು ಎಸ್‌ಪಿ, ಇಬ್ಬರು ಎಎಸ್ಪಿ, ಐವರು ಡಿವೈಎಸ್ಪಿ, 20 ಕ್ಕೂ ಹೆಚ್ಚು ಇನ್ಸ್ ಪೆಕ್ಟರ್ ಮತ್ತು ಪಿಎಸ್‌ಐ, 6 ಡಿಎಆರ್, 6 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 400 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಈದ್ ಮಿಲಾದ್ ಹಿನ್ನಲೆಯಲ್ಲಿ ಸೋಮವಾರ ಯಾವುವೇ ಗಣಪತಿ ವಿಸರ್ಜನೆಗೆ ಅವಕಾಶವಿರಲಿಲ್ಲ.

ಪೊಲೀಸರ ನಿರ್ಲಕ್ಷ್ಯ ವಿಡಿಯೋ ವೈರಲ್:
ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭ ಆರಂಭವಾದ ಕೋಮುಗಲಭೆಯಲ್ಲಿ ಹಲವು ಅಂಗಡಿಗಳಿಗೆ ಬೆಂಕಿ ಇಡುವ ಕೃತ್ಯ ನಡೆಯಿತು. ಸಾಧನಾ ಟೆಕ್ಸ್‌ಟೈಲ್ಸ್‌ಗೆ ಬೆಂಕಿಹಾಕಿ ಹಲ್ಲೆ ಮಾಡುತ್ತಿದ್ದ ಸಂದರ್ಭ ಪೊಲೀಸರು ಸ್ಥಳದಲ್ಲಿದ್ದರೂ, ‘30 ಲಕ್ಷ ರೂ. ಬಂಡವಾಳ ಹಾಕಿದ್ದಾರೆ ಸಾರ್, ದಯಮಾಡಿ ಮಳಿಗೆ ರಕ್ಷಿಸಿ’ ಎಂದು ಅಕ್ಕಪಕ್ಕದ ಅಂಗಡಿಯವರು ಬೇಡಿಕೊಂಡರೂ ಕ್ಯಾರೇ ಎನ್ನದೆ ಅಂಗಡಿಯಿಂದ ದೂರ ಹೋದ ಪೊಲೀಸರ ವಿಡಿಯೋ ವೈರಲ್ ಆಗಿದೆ. ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಟು ಟೀಕೆ ವ್ಯಕ್ತವಾಗುತ್ತಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net