ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

28 pvg nagalamadike photo 1 (2)
Published on

ಪಾವಗಡ : ಅಂತ್ಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿಯಾಗಿರುವ ಉತ್ತರ ಪಿನಾಕಿನಿ ನದಿತೀರದ ನಾಗಲಮಡಿಕೆಯ ಐತಿಹಾಸಿಕ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜ.1ರಂದು ಬ್ರಹ್ಮರಥೋತ್ಸವ ಜರುಗಲಿದೆ. ಸೋಮವಾರ ಆರಂಭವಾದ ಜಾತ್ರೆ ಹಾಗೂ ಹಾಗೂ ಎತ್ತಿನ ಪರಿಷೆ ಜ.11ರವರೆಗೆ ನಡೆಯಲಿದೆ. ಕುಕ್ಕೆಯನ್ನು ಆದಿ ಸುಬ್ರಹ್ಮಣ್ಯ ಎಂದೂ ದೊಡ್ಡಬಳ್ಳಾಪುರದ ಘಾಟಿಯನ್ನು ಮಧ್ಯ ಸುಬ್ರಹ್ಮಣ್ಯ ಎಂದೂ ನಾಗಲಮಡಿಕೆಯನ್ನು ಅಂತ್ಯ ಸುಬ್ರಹ್ಮಣ್ಯ ಎಂದೂ ಕರೆಯಲಾಗುತ್ತದೆ. ರಾಜ್ಯ ಹೊರ ರಾಜ್ಯಗಳಿಂದಲೂ ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರು ಉಪವಾಸ ಇದ್ದು, ರಥೋತ್ಸವದ ನಂತರ ಉತ್ತರ ಪಿನಾಕಿನಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಉಪವಾಸ ವ್ರತ ಕೈಬಿಡುವುದು ಇಲ್ಲಿನ ಸಂಪ್ರದಾಯ.

ಮಡೆಸ್ನಾನ ನಿಷೇಧ: ಈ ಹಿಂದೆ ಜಾತ್ರೆಯ ಸಮಯದಲ್ಲಿ ಬ್ರಾಹ್ಮಣರು ಊಟ ವಾಡಿದ ಎಲೆಗಳ ಮೇಲೆ ಭಕ್ತರು ಹೊರಳಿದರೆ, ಮತ್ತೆ ಕೆಲವರು ಎಂಜಲು ಎಲೆ ಹೊತ್ತುಕೊಂಡು ಹೋಗಿ ಉತ್ತರ ಪಿನಾಕಿನಿ ನದಿಯಲ್ಲಿ ಎಸೆದು ಹರಕೆ ತೀರಿಸುವ ಪದ್ಧತಿ ಇತ್ತು. ಆದರೆ, 4 ವರ್ಷಗಳಿಂದ ಮಡೆಸ್ನಾನ ನಿಷೇಧಿಸಲಾಗಿದೆ. ಹರಕೆ ತೀರಿಸುವುದರಿಂದ ಚರ್ಮವ್ಯಾಧಿ ಮತ್ತು ಮಕ್ಕಳಿಗೆ ಕಿವಿ ಸೋರುವುದು ನಿಲ್ಲುತ್ತದೆ ಎಂದು ನಂಬಿಕೆಯಾಗಿತ್ತು.

ಕ್ಷೇತ್ರದ ಪುರಾಣ : ಶತಮಾನಗಳ ಹಿಂದೆ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸವಾಗಿದ್ದರು. ಇವರು ಮನೆ ದೇವರಾದ ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವಕ್ಕೆ ಪ್ರತೀ ವರ್ಷ ಹೋಗುತ್ತಿದ್ದರು. ವೃದ್ಧರಾದ ನಂತರ ಅನ್ನಂಭಟ್ಟರು ಕುಕ್ಕೆಗೆ ಹೋಗಲು ಹೊರಟಾಗ ರಥ ಎಳೆಯುವ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇತ್ತ ಕುಕ್ಕೆಯಲ್ಲಿ ರಥವನ್ನು ಎಳೆದರೂ ಚಲಿಸಲಿಲ್ಲ. ಆಗ ಶ್ರೀ ಸ್ವಾಮಿ ವಟು ರೂಪದಲ್ಲಿ ಕಾಣಿಸಿಕೊಂಡು ಭಕ್ತನೊಬ್ಬ ಬರುತ್ತಿದ್ದಾನೆ. ಆತ ಬಂದು ಹಗ್ಗ ಹಿಡಿದ ನಂತರ ರಥ ಚಲಿಸುತ್ತದೆ ಎಂದು ಅದೃಶ್ಯವಾಗಿದ್ದು, ನಂತರ ಅದೇ ವಟು ರೂಪದಲ್ಲಿ ಬಂದು ನೀನು ಕುಕ್ಕೆಗೆ ಇನ್ನು ಮುಂದೆ ಬರುವುದು ಬೇಡ, ನೀನಿರುವಲ್ಲಿಗೆ ನಾನು ಬರುತ್ತೇನೆ ಎಂದು ಆಶೀರ್ವದಿಸಿದರಂತೆ. ಜತೆಗೆ ಕುಕ್ಕೆ ದೇವಾಲಯದಲ್ಲಿರುವ ನಾಗಾಭರಣವನ್ನೂ ಸಹ ಕೊಡಿಸಿದರು. ಊರಿಗೆ ಬಂದ ಅನ್ನಂಭಟ್ಟರು ಉಳುಮೆ ವಾಡುವಾಗ ನೇಗಿಲ ಮುಂದೆ ಸಾಗದಂತೆ ನಿಂತಿತು. ಅಗೆದು ನೋಡಿದಾಗ ಏಳು ಹೆಡೆಯ ನಾಗರಕಲ್ಲು ಸಿಕ್ಕಿದೆ. ಅದನ್ನು ಉತ್ತರ ಪಿನಾಕಿನಿ ದಡದಲ್ಲಿ ಪ್ರತಿಷ್ಠಾಪಿಸಿದರು. ಹೀಗಾಗಿ ಸ್ಥಳಕ್ಕೆ ನಾಗಲಮಡಿಕೆ ಎಂದು ಹೆಸರು ಬಂದಿದೆ.

ಮೂಲಸೌಕರ್ಯವಿಲ್ಲ: ದೇವಾಲಯಕ್ಕೆ ಲಕ್ಷಾಂತರ ರೂ. ಆದಾಯವಿದ್ದು, ಸೌಕರ್ಯ ಒದಗಿಸುವಲ್ಲಿ ಮುಜರಾಯಿ ಇಲಾಖೆ ವಿಫಲವಾಗಿದೆ. ವರ್ಷಕ್ಕೆ 30 ಲಕ್ಷ ರೂ. ಹುಂಡಿ ಹಣ ಸಿಗುತ್ತದೆ. ದೇಣಿಗೆ ನೀಡುವವರೂ ಇದ್ದಾರೆ. ಅದರೆ ಹಣ ಸರ್ಕಾರದ ಖಜಾನೆ ಸೇರುತ್ತಿದ್ದು, ಅಭಿವೃದ್ಧಿ ಶೂನ್ಯ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net