ಸರ್ಕಾರಿ ಆಸ್ಪತ್ರೆಯಲ್ಲಿ ನಾಗಲಕ್ಷ್ಮೀ ಚೌಧರಿ ರೌಂಡ್ಸ್​

14 09 2025_BGR RURAL_PAGE_06
ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋನಿಯಾ, ವೈದ್ಯರಾದ ಡಾ.ನಾಗೇಶ್​, ಡಾ.ಮಂಜುಳಾದೇವಿ, ಡಾ.ನಿಮಾರ್ಲಾ, ಡಾ.ರಾಜು, ಡಾ.ಅಮೀತ್​ಸಿಂಗ್​, ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ಮಂಜುಳಾ, ರಾಜಮ್ಮಪ್ರಕಾಶ್​ ಮತ್ತಿತರರು ಇದ್ದರು.
Published on

ನೆಲಮಂಗಲ : ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಶನಿವಾರ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಸೌಲಭ್ಯ ಹಾಗೂ ಸಮಸ್ಯೆ ಕುರಿತು ಪರಿಶೀಲಿಸಿದರು. ಖಾಸಗಿ ಕಾರ್ಯಕ್ರಮ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಅಧ್ಯಕ್ಷರು, ಸಾರ್ವಜನಿಕ ಆಸ್ಪತ್ರೆಗೂ ಭೇಟಿ ನೀಡಿ, ಮೊದಲಿಗೆ ಆಸ್ಪತ್ರೆ ಹೊರ ಮತ್ತು ಒಳ ರೋಗಿಗಳ ಕೊಠಡಿ, ಆಸ್ಪತ್ರೆ ಆವರಣದಲ್ಲಿನ ಸ್ವಚ್ಛತೆ, ವೈದ್ಯರ ಸೇವೆ, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಪ್ರಯೋಗಾಲಯ, ಔಷಧಾಲಯ, ಶಸ್ತ್ರಚಿಕಿತ್ಸಾ ಕೊಠಡಿ, ಮಹಿಳಾ ವಾರ್ಡ್​ ಸೇರಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳನ್ನು ವಿಚಾರಿಸಿ, ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ನಾಗಲಕ್ಷ್ಮೀ ಚೌಧರಿ, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲಾಗುತ್ತಿದ್ದು, ಸಾಕಷ್ಟು ಕಡೆ ಊಟದ ವ್ಯವಸ್ಥೆಯಿಲ್ಲ. ಆದರೆ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಟ್ಟೆ, ಬಾಳೆಹಣ್ಣು ಸೇರಿ ಪೌಷ್ಟಿಕ ಆಹಾರವನ್ನು ರೋಗಿಗಳಿಗೆ ನೀಡುತ್ತಿರುವುದು ಮಾದರಿ. ವೈದ್ಯರು ಕೆಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸುವಂತೆ ಮನವಿ ಮಾಡಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಬೇಕಿದೆ ರಕ್ತ ಸಂಗ್ರಹಾಲಯ : ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳಿಗೆ ಸರಿಯಾದ ಸಮಯಕ್ಕೆ ರಕ್ತ ದೊರೆಯದೇ ಸಾಕಷ್ಟು ಮಂದಿ ತೀವ್ರ ರಕ್ತಸ್ರಾವದಿಂದ ಮೃತಪಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕ ಆಸ್ಪತ್ರೆಗೆ ರಕ್ತ ಸಂಗ್ರಹಾಲಯ ನೀಡುವಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋನಿಯಾ ಮನವಿ ಸಲ್ಲಿಸಿದರು.

ನಗರ ಪೊಲೀಸ್​ ಠಾಣೆಗೆ ಭೇಟಿ : ಆಸ್ಪತ್ರೆ ಭೇಟಿ ಬಳಿಕ ನಗರ ಠಾಣೆಗೆ ಭೇಟಿ ನೀಡಿ ಮಹಿಳಾ ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಹಿಳಾ ದೌರ್ಜನ್ಯ ಪ್ರಕರಣಗಳ ಕುರಿತು ಆರಕ್ಷಕ ನಿರೀಕ್ಷಕ ಭರತ್​ಗೌಡ ಅವರಿಂದ ಮಾಹಿತಿ ಪಡೆದರು.

ರೋಗಿಗಳ ಕಾಳಜಿ ಇರಲಿ : ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾಳಿಜಿ ವಹಿಸಿ, ಸಾರ್ವಜನಿಕ ಆಸ್ಪತ್ರೆಯ ಆವರಣ ಸ್ವಚ್ಛತೆ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಉತ್ತಮ ರೀತಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದು ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net