

ಪಡುಬಿದ್ರಿ (ಉಡುಪಿ): ನಾಗಿಣಿ ಧಾರಾವಾಹಿ ಹಾಗೂ ಬಿಗ್‌ಬಾಸ್ ಸೀಸನ್ 7 ಮತ್ತು 9ರ ಫೈನಲಿಸ್ಟ್ ದೀಪಿಕಾ ದಾಸ್ ಮತ್ತವರ ಕುಟುಂಬಿಕರು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಸೋಮವಾರ ನಾಗ ಪ್ರತಿಷ್ಠಾಪನೆ ನೆರವೇರಿಸಿದರು.
ಹೆಜಮಾಡಿ ಶ್ರೀಹರಿ ಭಟ್ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಋತ್ವಿಜರು ನಾಗಸನ್ನಿಧಿಯಲ್ಲಿ ನಾಗಶಿಲಾ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಹೋಮ, ಕಲಶಾಭಿಷೇಕ, ಪವಮಾನ ಸೂಕ್ತ ಹೋಮ, ಆಶ್ಲೇಷಾ ಬಲಿ ಸಹಿತ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಸಗ್ರಿ ಗೋಪಾಲಕೃಷ್ಣ ಸಾಮಗರಿಂದ ನಾಗದರ್ಶನ ಸೇವೆ ನಡೆಯಿತು. ತಾಯಿ ಪದ್ಮಲತಾ ಜತೆಗೆ ಆಗಮಿಸಿದ ಹಾಸನ ಮೂಲದ ದೀಪಿಕಾ ದಾಸ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಂಡರು.
ಕುಟುಂಬದಲ್ಲಿ ನಾಗದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಾಗಬಿಂಬ ಪ್ರತಿಷ್ಠಾಪನೆ ನೆರವೇರಿಸಿದ್ದೇವೆ. ನಮ್ಮ ಕುಟುಂಬ ಶಿವನ ಆರಾಧಕರಾಗಿದ್ದು, ಶಿವನ ಸನ್ನಿಧಿಯಲ್ಲಿ ನಾಗ ಪ್ರತಿಷ್ಠಾಪನೆಗೆ ಆಲೋಚಿಸಿದ್ದೆವು. ಮರುನಿರ್ಮಾಣಗೊಂಡ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹತ್ವದ ಬಗ್ಗೆ ತಿಳಿದು ಇಲ್ಲಿಗೆ ಬಂದಿದ್ದೇವೆ ಎಂದು ದೀಪಿಕಾ ದಾಸ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮ್ಮಾಡಿ, ಟ್ರಸ್ಟಿಗಳಾದ ಶೇಷಗಿರಿ ರಾವ್, ಜಯಂತಿ ಎಸ್.ಆಚಾರ್ಯ ಮತ್ತು ಸುರೇಶ್ ದೇವಾಡಿಗ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಿನರಾಜ ಬಂಗೇರ, ಅರ್ಚಕ ಪದ್ಮನಾಭ ಭಟ್ ಮತ್ತು ಪದ್ಮನಾಭ ಆಚಾರ್ಯ, ಸುಕೀರ್ಥ ಆಚಾರ್ಯ, ತಾಪಂ ಮಾಜಿ ಸದಸ್ಯ ಸಚಿನ್ ನಾಯಕ್, ದೀಪಕ್ ವಿ.ಕೋಟ್ಯಾನ್ ಉಪಸ್ಥಿತರಿದ್ದರು.