ಕನ್ನಡ ಪರಿಸರ ನಿರ್ಮಾಣ ಅವಶ್ಯ

29 skp 1 (1)
Published on

ಶಿಕಾರಿಪುರ: ಕನ್ನಡ ಪರಿಸರ ನಿರ್ವಿುಸುವ ಮೂಲಕ ಮನಸ್ಸುಗಳನ್ನು ಅರಳಿಸುವುದು ಇಂದಿನ ಅವಶ್ಯ. ನಾಡಿನ ನೆಲ, ಜಲ, ಭಾಷೆ ರಕ್ಷಣೆಯ ಹೊಣೆಗಾರಿಕೆ ನಮ್ಮದು. ಉಸಿರುಸಿರಲಿ ಕನ್ನಡವಿರಬೇಕು. ನಮ್ಮ ನಡೆ, ನುಡಿಗಳಲ್ಲಿ ಕನ್ನಡವಿರಲಿ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ.ಸಾತ್ವಿಕ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಾನಪದ ಪರಿಷತ್, ಲಯನ್ಸ್ ಕ್ಲಬ್, ಬನಸಿರಿ ವಿದ್ಯಾಸಂಸ್ಥೆ, ಬಾಪೂಜಿ ವಿದ್ಯಾಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 7ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಇಂದು ಕನ್ನಡ ಭಾಷೆ ಉಪೇಕ್ಷೆಗೊಳಗಾಗುತ್ತಿದೆ. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಹಾಲು ಜೇನಿನ ಮಿಶ್ರಣದಂತೆ ಮಧುರ ಹಾಗೂ ಪರಿಶುದ್ಧವಾಗಿದೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ದಿನೇದಿನೆ ಸೊರಗುತ್ತಿದೆ. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಷಾದನೀಯ ಎಂದರು.

ತಾಲೂಕಿನಲ್ಲಿ 35ಕ್ಕೂ ಹೆಚ್ಚು ಪ್ರಾಚೀನ ಕೆರೆಗಳಿದ್ದು ಅವು ನಮಗೆ ವರದಾನ. ಅವುಗಳ ರಕ್ಷಣೆಯಾಗಬೇಕು. ಅವುಗಳಲ್ಲಿ ತಾಳಗುಂದದ ಪ್ರಣವೇಶ್ವರ ಕೆರೆ, ಬಂದಳಿಕೆಯ ಶಾಂತ ಕೆರೆ ಪ್ರಮುಖ. ಅಕಾಲಿಕ ಮಳೆ, ಪ್ರಕೃತಿ ವ್ಯತ್ಯಯಗಳಿಂದ ಸಕಾಲಕ್ಕೆ ಮಳೆಯಾಗದೆ ರೈತರ ಬೆಳೆಗಳಲ್ಲಿ ಅರ್ಧದಷ್ಟೂ ಫಲ ಸಿಗುತ್ತಿಲ್ಲ. ಬೆಳೆಗೆ ಸೂಕ್ತ ಬೆಲೆ ನಿಗದಿ, ತಾಲೂಕಿಗೊಂದು ರೈತಭವನ ನಿರ್ವಿುಸುವಂತೆ ಆಗ್ರಹಿಸಿದರು.

ಏಸೂರು ಕೊಟ್ಟರೂ ಈಸೂರು ಕೊಡೆವು ಎಂದು ಮೊದಲ ಬಾರಿಗೆ ಬ್ರಿಟಿಷರಿಗೆ ಸೆಡ್ಡು ಹೊಡೆದು ಸ್ವಾತಂತ್ರ್ಯ ಘೊಷಿಸಿಕೊಂಡ ಈಸೂರಿನ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಡೀ ದೇಶಕ್ಕೆ ಮೊದಲು ಸ್ವಾತಂತ್ರ್ಯ ಘೊಷಿಸಿಕೊಂಡ ಗ್ರಾಮದ ಪರಿಚಯವಾಗಬೇಕು. ಈ ಊರಿನ ಸಮೀಪದಲ್ಲಿ ಹಾಯ್ದುಹೋಗುವ ರೈಲ್ವೆ ಮಾರ್ಗದ ಒಂದು ಸ್ಟೇಷನ್​ಗೆ ಈಸೂರಿನ ಹೆಸರಿಡಬೇಕು. ಸಂಶೋಧಕ ಭೀಮಪ್ಪ ಮಾಸ್ಟರ್ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ತೆರೆಯಬೇಕು ಎಂದರು.

ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ತಾಪಂ ಅಧ್ಯಕ್ಷ ಸುರೇಶ್ ನಾಯ್್ಕ ನಿಕಟಪೂರ್ವ ಅಧ್ಯಕ್ಷೆ ಜಿ.ಅಮೃತಾ, ಜಿ.ಅಮೂಲ್ಯಾ, ಪುಷ್ಪ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ಸಂತೋಷ್ ವಿನ್ಸೆಂಟ್ ಡಿ’ ಅಲ್ಮೆಡಾ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ರಾಘವೇಂದ್ರ, ಬಿಸಿಎಂ ಅಧಿಕಾರಿ ಶೋಭಾ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪವಿತ್ರಾ, ಶಿಕ್ಷಕರಾದ ಎಂ.ಜಿ.ಪ್ರಕಾಶ್, ಟಿ.ಎಚ್.ಲೋಕೇಶ್, ಬಿ.ಆರ್.ಮಂಜಪ್ಪ, ಮಧುಕೇಶ್ವರ್, ಸುನೀಲ್​ಕುಮಾರ್, ರಾಘವೇಂದ್ರ ಕುಲಕರ್ಣಿ, ಮಹಮ್ಮದ್ ಹನೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net