

ಬೆಂಗಳೂರು: ಕನ್ನಡದ ಶ್ರೇಷ್ಠ ಸಾಹಿತಿ ನಾಡೋಜ ಕಮಲಾ ಹಂಪನಾ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಆದ ಬಹು ದೊಡ್ಡ ನಷ್ಟ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ಕಂಬನಿ ಮಿಡಿದಿದ್ದಾರೆ.
ಶ್ರೇಷ್ಠ ಅಧ್ಯಯನಶೀಲರಾಗಿ, ಸಂಶೋಧಕರಾಗಿ, ಉತ್ತಮ ಭಾಷಣಕಾರರಾಗಿ ಕಳೆದ ಆರು ದಶಕಗಳಿಂದ ಕನ್ನಡ ನಾಡು-ನುಡಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದ ಅವರು ಅನೇಕ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದ ಅವರು ಸರಳತೆ ಹಾಗೂ ಸೌಜನ್ಯಕ್ಕೆ ಹೆಸರಾಗಿದ್ದರು. ಡಾ.ಕಮಲಾ ಹಂಪನಾ ಅವರು ನಾಟಕ, ಕತೆಗಳಲ್ಲದೆ ಆಧುನಿಕ ವಚನಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಜೈನಧರ್ಮದ ಬಗ್ಗೆ ಅವರು ರಚಿಸಿದ ಕೃತಿಗಳು ಅವರ ಸಂಶೋಧನಾತ್ಮಕ ಸೃಜನಶೀಲತೆಗೆ ಹೆಸರಾಗಿವೆ. ಮಹಿಳಾ ಸಂವೇದನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದ್ಧತೆ ಹೊಂದಿದ್ದ ಅವರೊಂದಿಗೆ ಅನೇಕ ವೇದಿಕೆಗಳನ್ನು ಹಂಚಿಕೊಂಡಿದ್ದು, ಅವರ ಅಗಲಿಕೆಯಿಂದ ಒಬ್ಬ ಹಿರಿಯ ಅಕ್ಕನನ್ನು ಕಳೆದು ಕೊಂಡಂತಾಗಿದೆ. ಪತಿ ಡಾ. ಹಂಪನಾ ಅವರೊಂದಿಗೆ ಅವರದ್ದು ಅಪರೂಪದ ಆದರ್ಶ ಸಾಹಿತ್ಯ ದಾಂಪತ್ಯ ಎಂದು ಅಭಾಶಸಾಪ ಪರವಾಗಿ ಡಾ.ಸಿ.ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.