ನಾಡೋಜ ಚೆನ್ನವೀರ ಕಣವಿ ಆರೋಗ್ಯ ವಿಚಾರಣೆ

31 Dwd 4
Published on

ಧಾರವಾಡ: ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನಗರದ ಎಸ್​ಡಿಎಂ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ಆರೋಗ್ಯ ಕುರಿತು ವೈದ್ಯರು ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ನಾಡೋಜ ಡಾ. ಕಣವಿ ಅವರ ಆರೋಗ್ಯದ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿದೆ. ಚಿಕಿತ್ಸೆಗೆ ತಗುಲುವ ಎಲ್ಲ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುತ್ತಿದೆ. ಉತ್ತಮ ಚಿಕಿತ್ಸೆಯನ್ನು ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ ಎಂದರು.
ಡಾ. ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ಮಾತನಾಡಿ, ಡಾ. ಕಣವಿ ಅವರ ಆರೋಗ್ಯದಲ್ಲಿ ಕಳೆದ ವಾರಕ್ಕಿಂತ ಚೇತರಿಕೆ ಕಂಡುಬಂದಿದೆ. ರಕ್ತದೊತ್ತಡ ನಿಯಂತ್ರಣದಲ್ಲಿದ್ದು, ಕಿಡ್ನಿ ಕಾರ್ಯದಲ್ಲಿ ಸುಧಾರಣೆಯಾಗಿದೆ. ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದರು.
ವಿವಿಧ ವಿಷಯಗಳ ವೈದ್ಯರಾದ ಶ್ವಾಸಕೋಶ ತಜ್ಞ ಡಾ. ಶ್ರೀಕಾಂತ ಹಿರೇಮಠ, ಅರವಳಿಕೆ ತಜ್ಞ ಡಾ. ಶ್ರೀರಂಗ ತೋರಗಲ್ಲ ಮತ್ತು ಜನರಲ್ ಫಿಜಿಷಿಯನ್ ಡಾ. ರಾಜೇಂದ್ರ ಪಾರಿಕ್ ಅವರ ತಂಡ ರಚಿಸಲಾಗಿದ್ದು, ಡಾ. ಕಣವಿ ಅವರ ಆರೋಗ್ಯದ ಕುರಿತು ನಿರಂತರ ನಿಗಾ ವಹಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸನಗೌಡ ಕರಿಗೌಡರ, ಎಸ್​ಡಿಎಂ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗಡೆ, ಪಾಲಿಕೆ ಮಾಜಿ ಮೇಯರ್ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಎಸ್​ಡಿಎಂ ಆಸ್ಪತ್ರೆಯ ಪಿಆರ್​ಒ ನಾಗರಾಜ ಕಲ್ಲಾಪೂರ ಹಾಗೂ ಡಾ. ಕಣವಿ ಸಂಬಂಧಿ ನಾಗರಾಜ ಯಲಿಗಾರ, ಇತರರಿದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net