ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪ್ರಶಂಸೆ

27_06_Mdy_Kempegowda Jayanthi 01
Published on

ವಿಜಯವಾಣಿ ಸುದ್ದಿಜಾಲ ಮಂಡ್ಯ

ಜಿಲ್ಲಾದ್ಯಂತ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಆಚರಿಸಲಾಯಿತು.

ನಗರದ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರ ಮಹತ್ವದಾಗಿದೆ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಇವರು, ಬೆಂಗಳೂರನ್ನು ಎಲ್ಲ ಸಮುದಾಯದವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ ಹರಿಕಾರ ಎಂದರು.

ವ್ಯಾಪಾರ ವಹಿವಾಟು, ಕೃಷಿ ಸೇರಿ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಿಕೊಟ್ಟರು. ಅವರ ಅಭಿವೃದ್ಧಿ ಹೆಮ್ಮೆಯ ವಿಷಯ. ಬೆಂಗಳೂರಿನ ಪ್ರತಿ ಬಡಾವಣೆ ಒಂದೊಂದು ವಿಶೇಷತೆ ಹೊಂದಿದೆ. ಇದಲ್ಲದೆ, ಕೃಷಿ ಚಟುವಟಿಕೆ ಅನುಕೂಲವಾಗುವಂತೆ ಕೆರೆ, ಕಟ್ಟೆ ನಿರ್ಮಾಣ ಮಾಡಿದರು ಎಂದರು.

ಎಎಸ್ಪಿ ಶೋಭಾರಾಣಿ, ಉಪ ವಿಭಾಗಾಧಿಕಾರಿ ಸೂರಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಸಮುದಾಯದ ಮುಖಂಡರಾದ ನಾಗಣ್ಣ ಬಾಣಸವಾಡಿ, ಕೃಷ್ಣ ಇತರರಿದ್ದರು.

ದೂರದೃಷ್ಟಿ ನಾಯಕ: ನಗರದ ಮಹಾವೀರ ವೃತ್ತದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಂ ಸದಸ್ಯ ಚಂದಗಾಲು ಎನ್.ಶಿವಣ್ಣ, ಕೆಂಪೇಗೌಡರು ದೂರದೃಷ್ಟಿಯುಳ್ಳ ನಾಯಕ ಎಂದು ಬಣ್ಣಿಸಿದರು.

ಕೆಂಪೇಗೌಡರ ಆಡಳಿತ, ಅಭಿವೃದ್ಧಿಪರ ಚಟುವಟಿಕೆ, ದಾರ್ಶನಿಕತೆಗಳನ್ನು ಯಾರೂ ಮರೆಯುವಂತಿಲ್ಲ. ಐದು ಶತಮಾನ ಕಳೆದರೂ ಅವರ ಅಭಿವೃದ್ಧಿಯ ಕುರುಹುಗಳು ಅಚ್ಚಳಿಯದೆ ಉಳಿದಿವೆ ಎಂದರು. ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ನಾಗರಾಜು, ಹೊಸಹಳ್ಳಿ ಶಿವು, ಮಂಜುನಾಥ್, ಶೇಖರ್, ವಸಂತ್‌ಕುಮಾರ್, ಹರೀಶ್ ಇತರರಿದ್ದರು.

ಸಸಿ ವಿತರಣೆ: ಮಂಡ್ಯದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಸಿಗಳನ್ನು ವಿತರಿಸಲಾಯಿತು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ನಾಡು ಕಟ್ಟುವ ನಿಟ್ಟಿನಲ್ಲಿ ಕೆಂಪೇಗೌಡರು ಮಾದರಿ ನಾಯಕರೆಂದರು. ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಅನನ್ಯ ಹಾರ್ಟ್ ಸೆಂಟರ್ ಅಧ್ಯಕ್ಷೆ ಬಿ.ಎಸ್.ಅನುಪಮಾ, ಜೆಡಿಎಸ್ ಯುವ ಮುಖಂಡ ಎಂ.ಆರ್.ಮಂಜುನಾಥ್, ಬಿ.ಕೆ.ಅರುಣಜ್ಯೋತಿ, ಕೆ.ಟಿ.ಅನಿಲ್‌ಕುಮಾರ್, ಅಜಯ್‌ಕುಮಾರ್, ರವಿಕುಮಾರ್, ಚಾಮಲಾಪುರ ನಾಗರಾಜು, ಭೀಮೇಶ್, ನಿಂಗರಾಜು ಇತರರಿದದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net