ನಾಡಪ್ರಭು ಕೆಂಪೇಗೌಡರ ಋಣ ತೀರಿಸುವ ಕೆಲಸವಾಗಲಿ: ನಿರ್ಮಲಾನಂದಶ್ರೀ

mysore
Published on

ಮೈಸೂರು: ನಾಡಪ್ರಭು ಕೆಂಪೇಗೌಡರ ಋಣ ತೀರಿಸುವ ಕೆಲಸವಾಗಬೇಕು. ಅದಕ್ಕಾಗಿ ಅವರನ್ನು ಅರಿತುಕೊಂಡು ಅವರ ಆದರ್ಶಗುಣವನ್ನು ಪಾಲನೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಂಪೇಗೌಡರು ಕೇವಲ ಸಾಮಂತ ರಾಜರಲ್ಲ, ಮುಂದಿನ ಸಮಾಜದ ಕುರಿತು ದೂರದೃಷ್ಟಿಯ ನಾಯಕರಾಗಿದ್ದರು. ಅವರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು ಎಂದರು.


ಕೆಂಪೇಗೌಡರ ಮೂಲ ಚರಿತ್ರೆಯನ್ನು ಬಹಳಷ್ಟು ಜನರು ತಿಳಿದಿಲ್ಲ. ಹೀಗಾಗಿ ಅವರ ಕುರಿತು ಬೇರೆ ಬೇರೆ ರೀತಿಯ ವರದಿಗಳು, ಕೃತಿಗಳು ಹೊರಬಂದಿವೆ. ಇದರಿಂದ ಅವರ ಸಮಗ್ರ ವ್ಯಕ್ತಿತ್ವ ಚಿತ್ರಣ ಸಮರ್ಪಕವಾಗಿ ಅರ್ಥವಾಗಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನ ಮಾಡಿ ಕೆಂಪೇಗೌಡರ ಇತಿಹಾಸವನ್ನು ವಿಶ್ವವಿದ್ಯಾಲಯಗಳು ಕಟ್ಟಿಕೊಡಬೇಕು ಎಂದರು.


ಕೆಂಪೇಗೌಡರು ಬೆಂಗಳೂರು ನಿರ್ಮಾತೃದಾತರಷ್ಟೇ ಅಲ್ಲ, ಅವರೊಬ್ಬ ಕಾಯಕಯೋಗಿ, ಧರ್ಮಪ್ರಭು. ಬರೀ ಭೌತಿಕ ಸಂಪತ್ತು ಸೃಷ್ಟಿಸಿದೆ ವ್ಯಕ್ತಿಗಳ ಅಂತರಂಗ ಶುದ್ಧಿಗಾಗಿ ಗುಡಿಗಳನ್ನೂ ನಿರ್ಮಿಸಿದ್ದರು. ಜನರು ಭಕ್ತಿಮಾರ್ಗದಲ್ಲಿ ತೊಡಗಲು ಪ್ರೇರೇಪಿಸಿದ್ದರು. ಮನಸ್ಸು ಉಪಾಸನೆಗೆ ತೆರೆದುಕೊಳ್ಳಲು ಕಾರಣರಾಗಿದ್ದರು ಎಂದರು.


ಈಗಿನ ಬೆಂಗಳೂರಿನಲ್ಲಿ ಆ ಕಾಲದಲ್ಲೇ ಎಲ್ಲ ಸಮುದಾಯದವರಿಗೆ ನೆಲೆಯೂರಲು ಅವಕಾಶ ಕಲ್ಪಿಸಿದ್ದರು. ಜತೆಗೆ, ವಿವಿಧ ಕಸುಬುಗಳಿಗೂ ವೇದಿಕೆ ಕಲ್ಪಿಸಿಕೊಟ್ಟರು. ಇದು ಭವಿಷ್ಯದಲ್ಲಿ ಬೆಂಗಳೂರು ವಾಣಿಜ್ಯ ನಗರವಾಗಿ ಬೆಳೆಯಲು ಬುನಾದಿ ಹಾಕಿತು. ನಿಸ್ವಾರ್ಥ ಕಾಯಕತತ್ವ ಮತ್ತು ಭಕ್ತಿ ಉಪಾಸನೆಯ ಆದರ್ಶಗುಣಗಳಿಗೆ ಸಾಕ್ಷಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net