ನಾಡಪ್ರಭು ಕೆಂಪೇಗೌಡ ಅಭಿವೃದ್ಧಿಯ ಹರಿಕಾರ: ಬಿಜೆಪಿ ಯುವ ಮುಖಂಡ ಸಚ್ಚಿದಾನಂದ ಮೆಚ್ಚುಗೆ

Nadaprabhu Kempegowda Jayanti Mandya
Published on

ಮಂಡ್ಯ: ನಾಡಪ್ರಭು ಕೆಂಪೇಗೌಡ ಅಭಿವೃದ್ಧಿಯ ಹರಿಕಾರ. ಅವರ ದೂರದೃಷ್ಟಿಯನ್ನಿಟ್ಟುಕೊಂಡು ನಿರ್ಮಿಸಿದ ಬೆಂಗಳೂರು ಪ್ರಸ್ತುತ ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿದರು.

ನಗರದ ಕಾರಸವಾಡಿ ರಸ್ತೆಯ ಅರಳಿಕಟ್ಟೆ ವೃತ್ತದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ, ಅರಳಿಕಟ್ಟೆ ಸಂಘ, ಕನ್ನಡ ಪರ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲ ಸಮುದಾಯದವರು ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯ, ದೇಶದಿಂದ ಉದ್ಯೋಗಕ್ಕಾಗಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರಳಿಕಟ್ಟೆ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಭವ್ಯವಾದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಗೌಡಯ್ಯನದೊಡ್ಡಿ ತಿಮ್ಮೇಗೌಡ ಮಾತನಾಡಿ, ಕೆಂಪೇಗೌಡ ಅವರು ಬೆಂಗಳೂರು ನಗರ ನಿರ್ಮಾಣ ಹಾಗೂ ಕೆರೆ ಕಟ್ಟೆಗಳನ್ನು ನಿರ್ಮಿಸಿ ಎಲ್ಲ ಸಮುದಾಯದವರಿಗೆ ಪೇಟೆಗಳನ್ನು ನಿರ್ಮಾಣ ಮಾಡಿದರು. ಈ ಮೂಲಕ ಬದುಕು ಕಟ್ಟಿ ಕೊಳ್ಳಲು ಸಹಕಾರ ನೀಡಿದವರು. ಇಂತಹ ಹತ್ತಾರು ಕೆಲಸಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಕಾರಣವಾಯಿತು ಎಂದರು.

ಮುಖಂಡರಾದ ಶಿವಪ್ರಕಾಶ್‌ಬಾಬು, ಬೀರೇಶ್, ವೀರಭದ್ರ, ಕೇಶವ್, ಬಸವರಾಜು, ಕಲ್ಲಹಳ್ಳಿ ಶ್ರೀಧರ್, ಮಧುಸೂದನ್, ಪುಟ್ಟಸ್ವಾಮಿ, ಲಿಂಗಣ್ಣ, ಸೌಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net