ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಕಿವಿಮಾತು

Nadaprabhu Kempegowda Jayanti Mandya
Published on

ಮಂಡ್ಯ: ಒಕ್ಕಲಿಗ ಸಮುದಾಯ ಅಭಿವೃದ್ಧಿ ಪಥದತ್ತ ಸಾಗಲು ಒಗ್ಗಟ್ಟು ಅವಶ್ಯಕ ಎಂದು ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಸಲಹೆ ನೀಡಿದರು.

ನಗರದ ರೈತ ಸಭಾಂಗಣದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮದಿನೋತ್ಸವದ ಅಂಗವಾಗಿ ಸಂಘದ ಸದಸ್ಯರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ, ಸಾಧಕರಿಗೆ ಸನ್ಮಾನ, ಗಿಡ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಒಗ್ಗಟ್ಟಾಗಿ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ರೈತಾಪಿ ವರ್ಗದ ಜನರಿಗೆ ಇಳುವರಿ ಬರುವ ಬಿತ್ತನೆ ಬೀಜವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಐಎಎಸ್ ಹಾಗೂ ಐಪಿಎಸ್ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಆಯೋಜಿಸಲಾಗುವುದು. ಜಿಲ್ಲೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಜನಸಂಖ್ಯೆ ಇದ್ದಾರೆ. ಆದರೂ ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗ ಸಮುದಾಯ ಭವನವಿಲ್ಲ. ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದ ಜತೆ ಚರ್ಚೆ ಮಾಡುವ ಮೂಲಕ ಜಿಲ್ಲೆಯಲ್ಲಿ ಒಕ್ಕಲಿಗರ ಸಮುದಾಯಭವನ ನಿರ್ಮಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಮಾತನಾಡಿ, ರೈತರು ತಾಂತ್ರಿಕತೆಯನ್ನು ಬಳಸಿಕೊಂಡು ವ್ಯವಸಾಯ ಮಾಡಲು ಮುಂದಾಗಬೇಕು. ತಾನು ಬೆಳೆದ ಬೆಳೆಗೆ ಅವನೇ ದರ ನಿಗದಿ ಮಾಡುವ ಕಾಲ ಬರಬೇಕು. ಇದಲ್ಲದೆ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಮೌಲ್ಯವರ್ಧನೆ ಮಾಡಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ 20 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ರೈತರಿಗೆ ತರಬೇತಿ ಕೊಡಲಾಗುವುದು ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ವಸಂತರಾಜು, ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್.ಸುರೇಶ್, ಸಮಾಜಸೇವಕ ಮುದ್ದುಂಗೆರೆ ಎಂ.ಪಿ.ನಾರಾಯಣಪ್ಪ, ಸಂಘದ ಗೌರವಾಧ್ಯಕ್ಷ ಎಂ.ಎನ್.ಚಂದ್ರಶೇಖರ್, ಅಧ್ಯಕ್ಷ ನವೀನ್‌ಕುಮಾರ್, ಉಪಾಧ್ಯಕ್ಷ ಹನುಮಗೌಡ, ಕಾರ್ಯದರ್ಶಿ ಸತ್ಯಮೂರ್ತಿ ಇತರರಿದ್ದರು.

ಇದೇ ಸಂದರ್ಭದಲ್ಲಿ ಮೈಸೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ರುದ್ರೇಶ್, ಕೆಂಪೇಗೌಡ ಕ್ಷೇಮಾಭಿವೃದ್ಧಿ ಸಂಘದ ಆಲಕೆರೆ ಘಟಕದ ಅಧ್ಯಕ್ಷ ಕಾಫಿಪುಡಿ ಚಂದ್ರು, ಸಮಾಜಸೇವಕ ಮೂಗನಕೊಪ್ಪಲು ಕೆ.ವಿ.ತ್ಯಾಗರಾಜು, ಬಿದರ ಹೊಸಹಳ್ಳಿ ಕೃಷಿಕ ಬಂಧು ಗೌರಮ್ಮ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net