27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

18 HANUR 2
ಹನೂರಿನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಮುಮ್ತಾಜ್‌ಬಾನು, ಆನಂದ್, ಗುರುಪ್ರಸಾದ್, ಉಮೇಶ್ ಇತರರು ಇದ್ದರು.
Published on

ಹನೂರು: ನಾಡಪ್ರಭು ಕೆಂಪೇಗೌಡರ ಸಂದೇಶ ಎಲ್ಲರಿಗೂ ರವಾನೆಯಾಗುವುದರ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಬುಧವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಉತ್ತಮ ಸಮಾಜಕ್ಕೆ ಸ್ಫೂರ್ತಿದಾಯಕ. ಹಾಗಾಗಿ ಇವರ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ. ಜೂ.27ರಂದು ಸರ್ಕಾರದ ಆದೇಶದಂತೆ ತಾಲೂಕು ಆಡಳಿತ ವತಿಯಿಂದ ಆಚರಿಸಲಾಗುವುದು. ಇನ್ನುಳಿದಂತೆ ಸಮುದಾಯದ ಮುಖಂಡರೆಲ್ಲರೂ ಒಟ್ಟುಗೂಡಿ ಚರ್ಚಿಸಿ ದಿನಾಂಕ ತಿಳಿಸಿದರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ಆದೇಶದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಬೇಕು. ವಿದ್ಯುತ್ ದೀಪಾಲಂಕಾರ ಆಗಬೇಕು. ತಾಲೂಕಿನ ಸಮುದಾಯದ ಮುಖಂಡರನ್ನು ಆಹ್ವಾನಿಸಬೇಕು ಎಂದು ಇದೇ ವೇಳೆ ಸಮುದಾಯದ ಮುಖಂಡರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿನ ಸಮುದಾಯದ ಮುಖಂಡರ ಪಟ್ಟಿ ನೀಡಿದರೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರಲ್ಲದೆ, ರಾಷ್ಟ್ರೀಯ ಹಬ್ಬ ಹಾಗೂ ಜಯಂತಿ ಕಾರ್ಯಕ್ರಮಕ್ಕೆ ಆಯಾ ಸಮುದಾಯದ ಮುಖಂಡರ ಪಟ್ಟಿ ತಯಾರಿಸಿ ಒಂದು ತಿಂಗಳೊಳಗೆ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿ ಕಾವ್ಯಾ ಅವರಿಗೆ ಸೂಚಿಸಿದರು.

ನನೆಗುದಿಗೆ ಬಿದ್ದಿರುವ ಕೆಂಪೇಗೌಡ ವೃತ್ತ ನಿರ್ಮಾಣ ಸಂಬಂಧ ಮುತುವರ್ಜಿ ವಹಿಸಿ ಇರುವ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಇದೇ ವೇಳೆ ಮುಖಂಡರು ಮನವಿ ಮಾಡಿದರು. ಈ ಸಂಬಂಧ ಅಗತ್ಯ ಕ್ರಮವಹಿಸುವಂತೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರಿಗೆ ಶಾಸಕರು ಸೂಚಿಸಿದರು.

ಪಪಂ ಅಧ್ಯಕ್ಷೆ ಮುಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್, ಸದಸ್ಯ ಗಿರೀಶ್, ತಾಪಂ ಇಒ ಉಮೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಪರಿಶಿಷ್ಟ ವರ್ಗಗಳ ಸಹಾಯಕ ನಿರ್ದೇಶಕ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಸೆಸ್ಕ್ ಎಇಇ ರಂಗಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಮುಖಂಡರಾದ ರಾಜುಗೌಡ, ಮಂಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net