ನಾಡಪ್ರಭು ಕೆಂಪೇಗೌಡ ಮಹಾಕನಸುಗಾರ ; ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಣ್ಣನೆ

27Tmk_Kempegowda_Townhall
Published on

ತುಮಕೂರು: ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಬರೀ ಪ್ರಭು, ರಾಜ, ರಾಯರಾಗಿಯಷ್ಟೇ ಅಲ್ಲ, ಅವರೊಬ್ಬ ಅದ್ಭುತ ಕನಸುಗಾರರಾಗಿದ್ದರು. ಅವರೊಬ್ಬ ಮಹಾಕನಸುಗಾರ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ನಗರದ ಟೌನ್‌ಹಾಲ್ ವೃತ್ತದಲ್ಲಿ ಶನಿವಾರ ವಿವಿಧ ಸಂಘಸಂಸ್ಥೆಗಳು ಹಮ್ಮಿಕೊಂಡಿದ್ದ 511ನೇ ಕೆಂಪೇಗೌಡ ಜಯಂತಿ ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶ್ರೀಗಳು, ಬೆಂಗಳೂರು ನಗರ ಕೆಂಪೇಗೌಡರ ಕನಸು. ಬೆಂಗಳೂರು ನಗರ ಕೆಂಪೇಗೌಡರ ಮಹಾಸಂಕಲ್ಪದ ಕೂಸು. ಹಾಗಾಗಿ, ಬೆಂಗಳೂರಿನಲ್ಲಿ ಹುಟ್ಟಿರುವ ಹಾಗೂ ಅಲ್ಲಿಗೆ ಬಂದು ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರ ಮೇಲೆ ಕೆಂಪೇಗೌಡರ ಋಣವಿದೆ ಎಂದರು.

ಕೆಂಪೇಗೌಡರಲ್ಲೊಬ್ಬ ‘ಇನ್‌ಬಿಲ್ಟ್ ಇಂಜಿನಿಯರ್’ ಇದ್ದ. ಒಂದು ನಗರದ ಅಗತ್ಯ, ಅವಶ್ಯಕತೆ ಏನು ಎಂಬುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಬೆಂಗಳೂರು ಗಾರ್ಡನ್ ಸಿಟಿಯಾಗಬೇಕೆಂಬುದು ಕೆಂಪೇಗೌಡರ ಕನಸಾಗಿತ್ತು. ಗಾರ್ಡನ್ ಸಿಟಿಯಾಗಿ ಉಳಿಸಿಕೊಂಡರೆ ಮಾತ್ರ ಕೆಂಪೇಗೌಡರಿಗೆ ಖುಷಿಯಾಗುತ್ತದೆ. ಅದನ್ನೇನಾದರೂ ಗಾರ್ಬೇಜ್ ಸಿಟಿಯಾಗಿ ಮಾಡಿದರೆ ಕೆಂಪೇಗೌಡರು ಮತ್ತು ಕೆಂಪೇಗೌಡರ ಆತ್ಮ ನಮ್ಮ, ನಿಮ್ಮಗಳನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಬೋರೇಗೌಡ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಜೆ.ಕುಮಾರ್, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಬಿಜೆಪಿ ಮುಖಂಡ ಮನೋಹರಗೌಡ, ಮಾಜಿ ಕಾರ್ಪೋರೇಟರ್ ಪ್ರೆಸ್ ರಾಜಣ್ಣ, ಜೆಡಿಎಸ್ ಮಾಜಿ ನಗರಾಧ್ಯಕ್ಷ ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯ, ನೀತಿ, ನಿಯತ್ತಿಗೆ ಇನ್ನೊಂದು ಹೆಸರು ಕೆಂಪೇಗೌಡರು. ತ್ಯಾಗ, ಬಲಿದಾನಗಳಿಗೆ ಇನ್ನೊಂದು ಹೆಸರು ಕೆಂಪೇಗೌಡರ ಮನೆತನ. ಇಂತಹ ಮಹಾನುಭಾವರ ಧ್ಯೇಯ, ಆದರ್ಶವನ್ನು ನಮ್ಮ ತನು, ಮನ, ಮತಿಗಳಲ್ಲಿ ತುಂಬಿಕೊಂಡಾಗ ಮಾತ್ರ ಅವರ ಜಯಂತಿ, ಜನ್ಮದಿನಾಚರಣೆಗೆ ಅರ್ಥಬರುತ್ತದೆ. ಮಹಾಪುರುಷರ ಜಯಂತಿಗಳು ಬರೀ ಕೃತಜ್ಞತಾ ಸಮರ್ಪಣಾ ಸಮಾರಂಭಗಳಾಗಿ ರೂಪುಗೊಳ್ಳಬಾರದು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಜಯಂತಿಗಳ ಆಚರಣೆ ಸಾರ್ಥಕವೆನಿಸಲಿದೆ. ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net