ಸಮಾಜದಲ್ಲಿ ಸೇವಾ ಮನೋಭಾವ ಹೆಚ್ಚಲಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಮತ

Nadaprabhu Kempegowda day celebration Mandya
Published on

ಮಂಡ್ಯ: ವಿದ್ಯಾರ್ಥಿಗಳಿಗೆ ವಿದ್ಯೆಯು ಜ್ಞಾನವಾಗಿ ಪರಿವರ್ತನೆಯಾದರೆ ಮಾತ್ರ ಸಮಾಜದಲ್ಲಿ ಸೇವೆ ಮಾಡುವ ಮನೋಭಾವ ಹೆಚ್ಚುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್, ಮಂಡ್ಯ ಅಮೃತ ಲಯನ್ಸ್ ಕ್ಲಬ್, ಕೌಶಲ್ಯ ಅಲಯನ್ಸ್ ಕ್ಲಬ್, ಸನ್ಮತಿ ಅಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ, ನಾಡಪ್ರಭು ಕೆಂಪೇಗೌಡರ ದಿನಾಚರಣೆ, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ 2024ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯದಿಂದ ದೇಶವನ್ನು ಬಲಿಷ್ಠಗೊಳಿಸಬಹುದು. ರೈತ, ವೈದ್ಯ, ಸೈನಿಕ ಹಾಗೂ ಶಿಕ್ಷಕರಿಂದ ದೇಶದ ಅಭಿವೃದ್ಧಿ ನಿಂತಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಅವರು ಮಾಡಿದ ಸಾಧನೆ ಇಂದಿಗೂ ಪ್ರಸ್ತುತವಾಗಿದೆ. ದೇಶವಷ್ಟೇ ಅಲ್ಲ ವಿದೇಶಗಳಲ್ಲಿಯೂ ಛಾಪು ಮೂಡಿಸಿರುವುದು ಶ್ಲಾಘನೀಯವಾದುದು. ವಾಣಿಜ್ಯ ವಹಿವಾಟುಗಳಿಂದಲೇ ಹೆಸರು ಮಾಡಿರುವ ಬೆಂಗಳೂರು ಅಭಿವೃದ್ಧಿಯಲ್ಲಿ ನಮ್ಮ ಕೆಂಪೇಗೌಡರ ಪಾತ್ರ ಮುಖ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿದವರು ವೈದ್ಯರು. ಆ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ನೈಜ ವರದಿಯನ್ನು ಪ್ರಕಟಿಸುವ ಮೂಲಕ ಮಾಧ್ಯಮ ಕ್ಷೇತ್ರವು ನೊಂದವರಿಗೆ ನ್ಯಾಯ ನೀಡುವ ಮೂಲಕ ಮುನ್ನುಗ್ಗುತ್ತಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ, ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು, ಅಮೃತ್ ಅಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಲೋಕೇಶ್, ಅಲಯನ್ಸ್ ಉಪ ಪ್ರಾಂತಪಾಲ ಕೆ.ಆರ್.ಶಶಿಧರ್ ಈಚಗೆರೆ, ಪತ್ರಕರ್ತ ಎ.ಎಲ್.ಬಸವೇಗೌಡ, ಕಸಾಪ ನಗರ ಘಟಕ ಅಧ್ಯಕ್ಷೆ ಸುಜಾತಾ ಕೃಷ್ಣ, ಸನ್ಮತಿ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಮಹಾಲಕ್ಷ್ಮೀ, ಡಾ.ಎಸ್.ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net