

ಕೆ.ಆರ್.ಪೇಟೆ: ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವೇಗವಾಗಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಜೈನಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ 516ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದ ಕೆಂಪೇಗೌಡರು ಕೃಷಿಕರು, ಕುಶಲಕರ್ಮಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಅಗತ್ಯಗಳನ್ನು ಅರಿತು ಎಲ್ಲರಿಗೂ ವಿಷೇಶವಾದ ಪ್ರಾತಿನಿಧ್ಯ ನೀಡಿದರು. ಇಂದಿಗೂ ಬೆಂಗಳೂರಿನಲ್ಲಿ 64 ವಿವಿಧ ಕುಶಲಕರ್ಮಿಗಳ ಹೆಸರಿನ ಪ್ರದೇಶಗಳಿವೆ. ಕೃಷಿ ಹಾಗೂ ಕುಡಿಯುವ ನೀರಿಗೆ ಮಾದರಿಯಾದ ಜಲ ವ್ಯವಸ್ಥೆ ರೂಪಿಸಿದ್ದರು. ನಗರದಲ್ಲೇ ನೂರಾರು ಕೆರೆ ನಿರ್ಮಿಸಿದರು. ಯುವಕರು ಮಹನೀಯರ ಜಯಂತಿ ಆಚರಣೆಗಷ್ಟೇ ಸೀಮಿತರಾಗಬಾರದು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕೆಂಪೇಗೌಡರ ಪುಸ್ಥಳಿ ನಿರ್ಮಾಣಕ್ಕೆ ಗ್ರಾಮದ ಯುವಕರು ಮನವಿ ನೀಡಿದ್ದಾರೆ. ನಾನು ಕೂಡ ವೈಯಕ್ತಿಕವಾಗಿ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ವಿಚಾರ ಧಾರೆಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಜೈನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರಣಿ, ಗ್ರಾಪಂ ಉಪಾಧ್ಯಕ್ಷ ಸುಂದ್ರೇಶ್, ಸದಸ್ಯರಾದ ನಾಗಮ್ಮ ಜಲೇಂದ್ರ, ತಾರಾ ಮುಕುಂದ, ಮುಖಂಡರಾದ ನಂಜುಂಡಶೆಟ್ಟಿ, ನರಸೇಗೌಡ, ನೀಲಕಂಠ ಶಾಸ್ತ್ರಿ, ರಾಮಕೃಷ್ಣಗೌಡ, ನಿವೃತ್ತ ಶಿಕ್ಷಕ ಚಂದ್ರೇಗೌಡ, ರಾಮೇಗೌಡ, ಗೌಡೇಗೌಡ, ಜೈನಹಳ್ಳಿ ಕೆಂಪೇಗೌಡ ಸಂಘದ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಕಿರಣ್, ಸಹ ಕಾರ್ಯದರ್ಶಿ ಪ್ರತಾಪ್, ಖಜಾಂಚಿ ಶಿವೇಗೌಡ, ಜೆ.ಎಂ.ಸುನೀಲ್, ತುಳಸಿ ರಾಮೇಗೌಡ, ಅಶೋಕ್, ಮಂಜುನಾಥ್, ಜೆ.ಜೆ.ನಿಂಗರಾಜೇಗೌಡ, ಸಂತೋಷ್ ಉಪಸ್ಥಿತರಿದ್ದರು.