ಸೆ. 3ಕ್ಕೆ ನೂತನ ಕಟ್ಟಡದ ಉದ್ಘಾಟನೆ

nadaprabhu
Published on

ಕುಶಾಲನಗರ:

ಕಳೆದ 9 ವರ್ಷಗಳ ಹಿಂದೆ ಆರಂಭಗೊAಡ ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಂಘದ ಲಾಭಾಂಶ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸ್ವಂತ ಕಟ್ಟಡವನ್ನು ಸೆ. 3 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ಹೇಳಿದರು.

ಸಂಘದಲ್ಲಿ 960 ಸದಸ್ಯರು ಇದ್ದು, ಎಲ್ಲ ಸಹಕಾರದಿಂದ ಹಾಗೂ ಎಂ.ಡಿ. ನಾಗೇಶ್ ಮತ್ತು ಕುಟುಂಬಸ್ಥರು ದಾನ ನೀಡಿದ ನಿವೇಶನದಲ್ಲಿ ಸುಂದರವಾದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದು ನಮ್ಮ ಸಂಘದ ದೊಡ್ಡ ಸಾಧನೆ ಎಂದು ಸೋಮವಾರ ಸಂಘದ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದಯ್ಯಪುರಾಣಿಕ್ ಬಡಾವಣೆ 4ನೇ ಹಂತ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡಿರುವ ಸಹಕಾರ ಸಂಘದ ನೂತನ ಕಟ್ಟಡವನ್ನು ಬುಧವಾರ ಬೆಳಿಗ್ಗೆ 9.30 ಗಂಟೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ್ ಸ್ವಾಮೀಜಿ ಉದ್ಘಾಟಿಸುವರು. ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಗಮಿಸಲಿದ್ದಾರೆ.

ನಂತರ ಬೆಳಗ್ಗೆ 11 ಗಂಟೆಗೆ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಎನ್. ರವೀಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಆರ್. ಶರವಣಕುಮಾರ್, ನಾಡಪ್ರಭು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ. ರವಿಕುಮಾರ್, ಸಹಾಯಕ ನಿಬಂಧಕ ಶೈಲಜಾ ಹಾಗೂ ನಿವೇಶನ ದಾನಿ ಎಂ.ಡಿ.ನಾಗೇಶ್ ಭಾಗವಹಿಸಲಿದ್ದಾರೆ. ನೂತನ ಕಟ್ಟಡ ಉದ್ಘಾಟನೆ ಅಂಗವಾಗಿ ಎಲ್ಲ ಸದಸ್ಯರಿಗೂ ನೆನಪಿನ ಕಾಣಿಕೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಜಿ.ಬಿ. ಜಗದೀಶ್, ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿರ್ದೇಶಕರಾದ ಸಿ.ವಿ. ನಾಗೇಶ್, ಎಂ.ಡಿ. ರವಿಕುಮಾರ್, ಕೆ.ಕೆ. ಹೇಮ್ ಕುಮಾರ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ. ಸುನೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net