

ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಲಾ ಕಲಾವಿದ ಪಂ. ಗಜಾನನ ಹೆಗಡೆ ಗಿಳಿಗುಂಡಿ ಸ್ಮರಣೆ ಅಂಗವಾಗಿ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ನಾದನಮನ ಸಂಗೀತೋತ್ಸವ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು.
ಬೆಳಗ್ಗೆ 9.30ಕ್ಕೆ ಗುರುಪ್ರಸಾದ ಹೆಗಡೆ ಅವರ ಸಾರಂಗಿ ವಾದನದೊಂದಿಗೆ ಆರಂಭವಾಗಿದ್ದ ನಾದನಮನವು ರಾತ್ರಿವರೆಗೂ ಜರುಗಿತು. ಗುರುಪ್ರಸಾದ ಹೆಗಡೆ ಅವರ ಸಾರಂಗಿ ವಾದನ ಬಳಿಕ ಪ್ರತಿಭಾ ಮೂಲಿಮನೆ ಹೆಗಡೆ ಅವರು ಬಿಭಾಸ್ ರಾಗ ಪ್ರಸ್ತುತಪಡಿಸಿದರು. ಇವರಿಗೆ ನಿತಿನ ಹೆಗಡೆ ತಬಲಾ ಹಾಗೂ ರಿಷಭ ಹಾನಗಲ್ ಹಾಮೋರ್ನಿಯಂ ಸಾಥ್ ನೀಡಿದರು.
ನಂತರದಲ್ಲಿ ಗ್ವಾಲಿಯರ್ ಘರಾಣೆಯ ಗಾಯಕ ಪಂ. ರಾಮ ದೇಶಪಾಂಡೆ, ಗಾಯಕಿ ಬೆಂಗಳೂರಿನ ವಿದುಷಿ ರ್ಪೂಣಿಮಾ ಭಟ್ಟ ಕುಲಕರ್ಣಿ ಸುಮಧುರವಾಗಿ ಗಾಯನ ಪ್ರಸ್ತುತಪಡಿಸಿದರು. ಅವರಿಗೆ ಬಿ.ದೇರಾಜೆ ತಬಲಾ ಸಾಥ್ ನೀಡಿದರೆ, ಶಿರಸಿಯ ಭರತ ಹೆಗಡೆ ಹಾಮೋರ್ನಿಯಂ ಸಾಥ್ ನೀಡಿದರು.
ಸಂಜೆ 6 ಗಂಟೆ ಹೊತ್ತಿಗೆ ಪ್ರಸಿದ್ಧ ಕೊಳಲು ವಾದಕ ಪಂ. ಪ್ರವಿಣ ಗೋಡಖಿಂಡಿ ಹಾಗೂ ಅವರ ಪುತ್ರ ಷಡ್ಜ ಗೋಡಖಿಂಡಿ ಜುಗಲ್ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು. ಇವರಿಗೆ ಯಶವಂತ ವೈಷ್ಣವ ತಬಲಾ ಸಾಥ್ ನೀಡಿದರು. ಕೊನೆಯಲ್ಲಿ ಪಂ. ಯೋಗೇಶ ಎಸ್ ಅವರ ತಬಾಲ ಸೋಲೋ ಮೂಲಕ ಸಂಗೀತೋತ್ಸವ ಸಂಪನ್ನಗೊಂಡಿತು.