ಚರ್ಚೆಗೆಡೆ ಮಾಡಿದ ನಡಹಳ್ಳಿ ಹೇಳಿಕೆ

Published on

ಮುದ್ದೇಬಿಹಾಳ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈಚೆಗೆ ತಮ್ಮ ಫಾರ್ಮ್‌ಹೌಸ್‌ನಲ್ಲಿ ಏರ್ಪಡಿಸಿದ್ದ ಸಭೆಯೊಂದರಲ್ಲಿ ಮುದ್ದೇಬಿಹಾಳ ಪಟ್ಟಣದ ವೈದ್ಯರೊಬ್ಬರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿರುವುದು ಇದೀಗ ಈ ಭಾಗದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.

ನಡಹಳ್ಳಿ ಅವರು ಮಾತನಾಡುವಾಗ ಪಟ್ಟಣದ ಖ್ಯಾತ ವೈದ್ಯರೊಬ್ಬರಿಗೆ ನೀನು ಬಿಜೆಪಿಗೆ ಬೆಂಬಲ ನೀಡುತ್ತಿರುವೆ. ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಕೆಲವರು ಮೊಬೈಲ್ ಕರೆ ಮಾಡಿ ಬೆದರಿಸಿದ್ದಾಗಿ ಅವರು ನಮ್ಮ ತಂದೆಯ ಹತ್ತಿರ ಹೇಳಿಕೊಂಡಿದ್ದಾರೆ. ಶೀಘ್ರವೇ ಅವರು ಮೊಬೈಲ್ ಸಂಖ್ಯೆ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.

ಬೆದರಿಕೆ ಹಾಕುತ್ತಿರುವವರು ಯಾರು ಅನ್ನೋದು ಪೊಲೀಸರ ನಿಷ್ಪಕ್ಷಪಾತ ಕ್ರಮದಿಂದ ಹೊರಬರಬೇಕು. ಪೊಲೀಸರು ಯಾರದೋ ಏಜಂಟರ ರೀತಿ ಕೆಲಸ ಮಾಡಿದರೆ ಇಂಥ ಬೆದರಿಕೆ ಕರೆಗಳು ಮುಚ್ಚಿ ಹೋಗುವ ಆತಂಕ ಇದೆ ಎಂದಿದ್ದರು. ಸದ್ಯ ಆ ವೈದ್ಯರು ಯಾರು ? ಅವರಿಗೆ ಬೆದರಿಕೆ ಹಾಕಿದವರು ಯಾವ ಪಕ್ಷದವರು ಅನ್ನೋ ಚರ್ಚೆ ಇಲ್ಲಿ ನಡೆಯುತ್ತಿದ್ದು ಬಿಜೆಪಿ ಬೆಂಬಲಿಸುವ ಎಲ್ಲ ವೈದ್ಯರ ಬಗ್ಗೆಯೂ ಜನ ಚರ್ಚಿಸತೊಡಗಿದ್ದಾರೆ.

ಆದರೆ ನೈಜವಾಗಿ ಯಾರಿಗೆ ಬೆದರಿಕೆ ಬಂದಿದೆ ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ. ಯಾವುದೇ ವೈದ್ಯರೂ ಕೂಡ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿಲ್ಲ. ಇತ್ತೀಚೆಗೆ ಪಿಎಸ್‌ಐ ಮತ್ತು ಕೆಲ ಪೊಲೀಸರು ಗೋಮಾತೆಗೆ ನ್ಯಾಯ ಕೇಳಲು ಹೋದ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದುಕೊಂಡ ರೀತಿಯಿಂದಾಗಿ ಮುದ್ದೇಬಿಹಾಳ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಆ ವೈದ್ಯರು ಪೇಚಿಗೆ ಸಿಲುಕಿದಂತಾಗಿದೆ ಎನ್ನುವ ಮಾತು ಇಲ್ಲೆಲ್ಲ ಕೇಳಿಬರುತ್ತಿರುವುದು ಪರಿಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net