ಹುಬ್ಬಳ್ಳಿ: ಕರ್ನಾಟಕ ಸರ್ಕಾರವು ಪಿಂಜಾರ್- ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದರೂ ಅನುದಾನ ನೀಡಿಲ್ಲ. ಕೂಡಲೇ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿ ಜುಲೈ 22ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪಿಂಜಾರ್, ನದಾಫ್ ಸಂಘದ ಕುಂದಗೋಳ ತಾಲೂಕು ಘಟಕದ ಅಧ್ಯಕ್ಷ ಖಾದರಸಬಾ ನದಾಫ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಸ್ಥಳಿಯ ತಹಸೀಲ್ದಾರ್, ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ನದಾಫ್, ಪಿಂಜಾರ್ ಉಪಜಾತಿಯ ಪ್ರವರ್ಗ 1 ಮೀಸಲಾತಿ ಹೊಂದಿದೆ ಎಂದರು.
ಹಲವು ವರ್ಷಗಳ ಹೋರಾಟದ ಫಲವಾಗಿ 2023ರಲ್ಲಿ ಪ್ರತ್ಯೇಕವಾಗಿ ಪಿಂಜಾರ್, ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಆದೇಶ ಮಾಡಿದೆ. ಆದರೆ, ಇದುವರೆಗೂ ಅನುದಾನ ನೀಡಿಲ್ಲ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಶಾಸಕರು, ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಸಂದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಮಾಜಿ ಅಧ್ಯಕ್ಷ ಕೆ.ಎಂ. ಹಾರೋಬೇಡಿ, ಶರೀಫ್ಸಾಬ ನದಾಫ್, ಮಾಬುಬಅಲಿ ನದಾಫ್, ಫರೀದಾ ಬೇಗಂ ನದಾಫ್ ಇತರರು ಗೋಷ್ಠಿಯಲ್ಲಿದ್ದರು.