

ರಾಯಚೂರು: ನವರಾತ್ರಿ ನಿಮಿತ್ತ ನಗರಸಭೆಯಿಂದ ಮಂಗಳವಾರ ಸಂಜೆ ನಗರದಲ್ಲಿ ನಾಡದೇವಿಯ ಮೆರವಣಿಗೆ ನಡೆಸುವುದರ ಜತೆಗೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರಸಭೆ ಆವರಣದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿ, ದೇಶದಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತೃಪ್ತರಾಗುವಂತೆ ದೇವಿ ಕರುಣಿಸಲಿ. ಭಕ್ತಿ, ಶ್ರದ್ಧೆಯಿಂದ ದೇವಿಯನ್ನು ಪೂಜಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ನಗರಸಭೆಯಿಂದ ಪ್ರತಿವರ್ಷ ದಸರಾ ಪ್ರಯುಕ್ತ ನಾಡದೇವಿಯ ಮೆರವಣಿಗೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದ್ದು, ನಾಡದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ನಗರಸಭೆಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಮಾಣಿಕಪ್ರಭು ದೇವಸ್ಥಾನದಲ್ಲಿನ ಬನ್ನಿ ಮಂಟಪಕ್ಕೆ ತೆರಳಿದ ನಂತರ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಮುಡಿದು ಒಬ್ಬರಿಗೊಬ್ಬರು ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಡೊಳ್ಳು, ತಾಳಮದ್ದಲೆ, ವೀರಗಾಸೆ ಮುಂತಾದ ಮಂಗಳವಾದ್ಯಗಳ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯುದ್ದಕ್ಕೂ ಜನರು ಪುಷ್ಪಾರ್ಚನೆ ನಡೆಸಿ ನಾಡದೇವಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಬಸವರಾಜ ಪಾಟೀಲ್ ದರೂರು, ಈ.ಶಶಿರಾಜ, ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ರವಿ ಬೋಸರಾಜು, ಮಹ್ಮದ್ ಶಾಲಂ, ಜಿ.ಶಿವಮೂರ್ತಿ, ರವೀಂದ್ರ ಜಲ್ದಾರ್, ಕೆ.ಶಾಂತಪ್ಪ, ಆಂಜಿನೇಯ ಕಡಗೋಲ, ಮಹೇಂದ್ರರೆಡ್ಡಿ, ಮುಕ್ತಿಯಾರ್, ಜಿ.ನರಸರೆಡ್ಡಿ ಉಪಸ್ಥಿತರಿದ್ದರು.