

ಶಿರಸಿ: ಕಳೆದ ಹನ್ನೆರಡು ವರ್ಷಗಳಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಾರ ಮತ್ತು ಪ್ರಚಾರಕ್ಕಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವ ತಾಲೂಕಿನ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನ ಜ. 11 ರಂದು ’ನಾದ ಸಿಂಚನ’ ಸಂಗೀತ ಕಾರ್ಯಕ್ರಮವನ್ನು ನಗರದ ಟಿಎಂಎಸ್ ಸಭಾಂಗಣದಲ್ಲಿ ಸಂಜೆ 5.30ರಿಂದ ಆಯೋಜಿಸಲಾಗಿದೆ ಎಂದು ಸಂಯೋಜಕ, ಕಲಾವಿದ ಗುರುಪ್ರಸಾದ ಹೆಗಡೆ ಗಿಳಿಗುಂಡಿ ತಿಳಿಸಿದ್ದಾರೆ. ಮೊದಲಿಗೆ ಉದಯೋನ್ಮುಖ ಕಲಾವಿದೆ ಸಂಗೀತಾ ಹೆಗಡೆ ಅವರ ಗಾಯನವಿದ್ದು, ಸಹಕಲಾವಿದರಾಗಿ ತಬಲಾದಲ್ಲಿ ಕೇಶವ ಜೋಶಿ ಬೆಂಗಳೂರು ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕರಿಸಲಿದ್ದಾರೆ. ಬಳಿಕ ಪ್ರಸಿದ್ಧ ಸಂತೂರ್ ಕಲಾವಿದ ಡಾ. ಬಿಪುಲ್ ಕುಮಾರ್ ರೈ ದೆಹಲಿ ಹಾಗೂ ಪ್ರಸಿದ್ಧ ಸಂವಾದಿನಿ ಕಲಾವಿದರಾದ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ ಅವರಿಂದ ಸಂತೂರ್ ಹಾಗೂ ಹಾಮೋನಿಯಂ ಜುಗಲ್ಬಂದಿ ನಡೆಯಲಿದೆ. ತಬಲಾದಲ್ಲಿ ಹೇಮಂತ್ ಜೋಶಿ ಧಾರವಾಡ ಸಹಕರಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.