

ಹೊಸದುರ್ಗ: ನಾಡಹಬ್ಬ ದಸಾರ ಉತ್ಸವ ಉದ್ಘಾಟಿಸಲಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಹೊಸದುರ್ಗ ನಾಗರಿಕ ವೇದಿಕೆ ವತಿಯಿಂದ ಸೆ.16ರಂದು ಸನ್ಮಾನಿಸಲಾಗುವುದು ಎಂದು ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾಡಹಬ್ಬ ಉದ್ಘಾಟನೆಗೆ ರಾಜ್ಯ ಸರ್ಕಾರವು ಸಂಗೀತ ಲೋಕದ ಮಾಂತ್ರಿಕ ಹಂಸಲೇಖ ಅವರನ್ನು ಆಯ್ಕೆ ಮಾಡಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದರು.
ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣವಾಗುವ ಮೂಲಕ ನಾಡು-ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಂಸಲೇಖ ಅವರನ್ನು ದಸರಾ ಉದ್ಘಾಟನೆಯ ಮೊದಲು ಹೊಸದುರ್ಗಕ್ಕೆ ಕರೆದು ಅಭಿನಂದಿಸಬೇಕು ಎನ್ನುವ ನಾಗರಿಕರ ಒತ್ತಾಸೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಸೆ.16ರ ಶನಿವಾರ ಸಂಜೆ 5 ಗಂಟೆಗೆ ಪಟ್ಟಣದ ಟಿ.ಬಿ.ವೃತ್ತದಲ್ಲಿರುವ ವಿರಾಟ್ ಹಿಂದು ಮಹಾಸಾಗರ ಗಣಪತಿಯ ವೇದಿಕೆಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ.
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಬೆಲಗೂರಿನ ಶ್ರೀ ವಿಜಯ ಮಾರುತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿನಂದನಾ ನುಡಿ ನುಡಿಯಲಿದ್ದಾರೆ. ಕವಿ ಚಂದ್ರಶೇಖರ ತಾಳ್ಯ, ಮಂಜಪ್ಪ ಮಾಗೋದಿ ಇತರರು ಪಾಲ್ಗೊಳ್ಳಲಿದ್ದಾರೆ. ನಂತರ ಖ್ಯಾತ ಗಾಯಕರಿಂದ ಗಾಯನ ರಸ ಸಂಜೆ ಕಾರ್ಯಕ್ರಮ ನಡೆಲಿದೆ ಎಂದು ಮಾಹಿತಿ ನೀಡಿದರು.